ಬೆಂಗಳೂರು : ಸೆಪ್ಟೆಂಬರ್ 23: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತವಾಗಿ ಮೂರು ಬಾರಿ ಸಂಸದರಾಗಿ ಆಯ್ಕೆಗೊಂಡಿದ್ದ ನಳಿನ್ ಕುಮಾರ್ ಕಟೀಲ್ ಅವರು ಸದ್ಯ ಮೂಲೆಗುಂಪಾಗಿದ್ದಾರೆ.ಇದೀಗ ಕಟೀಲ್ ರಾಜ್ಯ ರಾಜಕೀಯಕ್ಕ ಎಂಟ್ರಿಯಾಗಲಿದ್ದಾರೆ.
ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನಪರಿಷತ್‌ನ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಅಕ್ಟೋಬರ್ 21 ಕ್ಕೆ ಚುನಾವಣಾ ದಿನಾಂಕ ನಿಗದಿಯಾದ ಬೆನ್ನಲ್ಲೇ ಟಿಕೆಟ್‌ಗಾಗಿ ಬಿಜೆಪಿ ಪಾಳಯದಲ್ಲಿ ಭಾರೀ ಪೈಪೋಟಿ ಶುರುವಾಗಿದೆ. ಇರುವ ಒಂದು ಸ್ಥಾನಕ್ಕೆ ಹಲವು ನಾಯಕರು ಆಕಾಂಕ್ಷಿಗಳಿದ್ದು, ನಳಿನ್‌ಕುಮಾರ್ ಕಟೀಲ್, ಉದಯಕುಮಾರ್ ಶೆಟ್ಟಿ, ಪ್ರಮೋದ್ ಮಧ್ವರಾಜ್, ಕೆ.ಸುರೇಶ್ ಕುಮಾರ್ ಮತ್ತು ಸತೀಶ್ ಕಂಪಲ ಅವರ ಹೆಸರುಗಳು ಮುನ್ನೆಲೆಗೆ ಬಂದಿವೆ.
ಲೋಕಸಭೆ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಜಯಗಳಿಸಿದ ನಂತರ ಕೋಟಾ ಶ್ರೀನಿವಾಸ ಪೂಜಾರಿ ಅವರು ಸ್ಥಾನವನ್ನು ತೆರವು ಮಾಡಿದ ನಂತರ ಚುನಾವಣೆ ಅನಿವಾರ್ಯವಾಯಿತು. ಇನ್ನೂ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ಕೊಡಿಸಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ ಎಲ್ ಸಂತೋಷ್ ಅವರು ಒಲವು ತೋರಿದ್ದಾರೆ ಎನ್ನಲಾಗಿದೆ. 2024ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಹೀಗಾಗಿ ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಕರೆತರುವ ನಿಟ್ಟಿನಲ್ಲಿ ಬಿ ಎಲ್ ಸಂತೋಷ್ ಬಿಗ್ ಪ್ಲಾನ್ ನಡೆಸಿದ್ದಾರೆ ಎನ್ನಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕಂಪಲ, ಮಂಗಳೂರು ವಿಭಾಗೀಯ ಉಸ್ತುವಾರಿ ಉದಯ್ ಕುಮಾರ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸೇರಿದಂತೆ ಹಲವು ಸ್ಪರ್ಧಿಗಳು ಒಂದೇ ಸ್ಥಾನದ ಟಿಕೆಟ್ ಗೆ ಲಾಬಿ ನಡೆಸಿದ್ದು, ಬಿ ಎಲ್ ಸಂತೋಷ್ ಅವರು ನಳಿನ್ ಕುಮಾರ್ ಕಟೀಲ್ ಅವರ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಘಟಕವು ಹೊಸ ಮುಖಗಳಿಗೆ ಒಲವು ತೋರಿದ್ದರೂ, ಕಟೀಲು ಈಗಾಗಲೇ ಮೂರು ಬಾರಿ ಸಂಸದರಾಗಿ ಸೇವೆ ಸಲ್ಲಿಸಿರುವುದರಿಂದ ಕರಾವಳಿ ಕರ್ನಾಟಕದ ನಿಷ್ಠಾವಂತ ನಾಯಕರಿಗೆ ಈ ಸ್ಥಾನ ನೀಡಬೇಕು ಎಂಬುದು ರಾಜ್ಯ ನಾಯಕರ ಅಭಿಪ್ರಾಯವಾಗಿದೆ.
ಟಿಕೆಟ್‌ಗಾಗಿ ಬಿಲ್ಲವ ಮುಖಂಡರು ಲಾಬಿ
ಈ ಹಿಂದೆ ತಮ್ಮ ಸಮುದಾಯದ ನಾಯಕ ಕೋಟಾ ಶ್ರೀನಿವಾಸ ಪೂಜಾರಿಯವರು ಈ ಸ್ಥಾನವನ್ನು ಹೊಂದಿದ್ದರಿಂದ ಕೆಲವು ವರ್ಗದ ಬಿಲ್ಲವ ಮುಖಂಡರು ಸಹ ತಮ್ಮ ಸಮುದಾಯದ ನಾಯಕ ಸತೀಶ್ ಕಂಪಾಲಾ ಅವರ ಪರವಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಎಂಎಲ್‌ಸಿ ಚುನಾವಣೆಗೆ ಸ್ಪರ್ಧಿಸಲು ಹಿರಿಯ ನಾಯಕ ಸಿಟಿ ರವಿ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಹೀಗಾಗಿ ಕಟೀಲ್ ಕಣಕ್ಕಿಳಿಯುವುದರಲ್ಲಿ ಯಾವುದೇ ತಪ್ಪಿಲ್ಲ.ಮೇಲಾಗಿ ಕಟೀಲು ನಿಷ್ಠಾವಂತ ನಾಯಕರಾಗಿದ್ದು, ಪಕ್ಷದ ಸೂಚನೆಗೆ ಮಣಿದು ಬ್ರಿಜೇಶ್ ಚೌಟ ಅವರಿಗೆ ದಕ್ಷಿಣ ಕನ್ನಡ ಲೋಕಸಭಾ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ ಎಂದು ಹಿರಿಯ ನಾಯಕರೊಬ್ಬರು ಕಟೀಲ್ ಪರ ಕೇಂದ್ರದ ನಾಯಕತ್ವಕ್ಕೆ ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಕೋರ್ ಕಮಿಟಿ ಸೋಮವಾರ ಸಭೆ ಸೇರಲಿದ್ದು, ಅಂತಿಮ ನಿರ್ಧಾರ ಕೈಗೊಳ್ಳಲು ಪಕ್ಷದ ವರಿಷ್ಠರಿಗೆ ಶಿಫಾರಸು ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ನಾಮಪತ್ರ ಸಲ್ಲಿಸಲು ಅಕ್ಟೋಬರ್ 3 ಕೊನೆಯ ದಿನವಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳು, ಸಂಸದರು, ಶಾಸಕರು ಮತ್ತು ಎಂಎಲ್‌ಸಿಗಳು ಮಾತ್ರ ಮತದಾರರಾಗಿರುವುದರಿಂದ, ಈ ಕ್ಷೇತ್ರದಲ್ಲಿ ಕೇಸರಿ ಪಕ್ಷವು ಬಹುಮತ ಪಡೆದಿರುವುದರಿಂದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ.