ಮಂಗಳೂರು : ಮೈಸೂರು ಮುಡಾ ಭೂಹಗರಣದ ಬಗ್ಗೆ ರಾಜ್ಯಪಾಲರು ಪ್ರಾಷಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯನವರ ಭೂಹಗರಣದಲ್ಲಿ ಹೈಕೋರ್ಟ್ ತೀರ್ಪು ಬಗ್ಗೆ ಪ್ರತಿಕ್ರಿಯಿಸಿರುವ ಚೌಟ, ಹೈಕೋರ್ಟ್ ಪೀಠ ಸಿಎಂ ಸಿದ್ದರಾಮಯ್ಯನವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವುದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ನಿರಂತರ ಪ್ರತಿಭಟನೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವ ದಲ್ಲಿ ಇತ್ತೀಚೆಗೆ ನಡೆಸಿದ್ದ ಮೈಸೂರು ಚಲೋ ಪಾದಯಾತ್ರೆಗೆ ಸಂದಿರುವ ದೊಡ್ಡ ಗೆಲುವು ಎಂದು ಹೇಳಿದ್ದಾರೆ.

ತಮ್ಮ ರಾಜಕೀಯ ಬದುಕು ಯಾವುದೇ ಕಪ್ಪು-ಚುಕ್ಕೆಗಳಿಲ್ಲದ ತೆರೆದ ಪುಸ್ತಕ ಎಂಬುದಾಗಿ ಇಷ್ಟುದಿನ ಹೇಳಿಕೊಂಡು ತಿರುಗಾಡುತ್ತಿದ್ದ ಸಿಎಂ ಸಿದ್ದರಾಮಯ್ಯನವರ ನಿಜ ಬಣ್ಣ ಇಂದಿನ ಈ ಕೋರ್ಟ್ ತೀರ್ಪಿನಿಂದ ಬಯಲಾಗಿದೆ. ಮೈಸೂರು ಮುಡಾ ಹಗರಣದಲ್ಲಿ ಅಕ್ರಮ ಎಸಗಿರುವುದಕ್ಕೆ ಹೈಕೋಟ್ ನೀಡಿರುವ ಈ ತೀರ್ಪಿಗಿಂತ ದೊಡ್ಡ ಸಾಕ್ಷ್ಯ ಬೇರೆ ಬೇಕಿಲ್ಲ. ಹೀಗಾಗಿ, ಸಿಎಂ ಸ್ಥಾನದಲ್ಲಿ ಮುಂದವರಿಯುವುದಕ್ಕೆ ಸಿದ್ದರಾಮಯ್ಯನವರಿಗೆ ಇನ್ನು ಯಾವುದೇ ನೈತಿಕತೆಯಿಲ್ಲ.

ತತ್‌ಕ್ಷಣವೇ ಕರ್ನಾಟಕದ ಜನತೆ ಹಾಗೂ ಕಾನೂನಿಗೆ ಗೌರವ ಕೊಟ್ಟು ಸಿಎಂ ಸ್ಥಾನದಿಂದ ನಿರ್ಗಮಿಸಬೇಕೆಂದು ಚೌಟ ಆಗ್ರಹಿಸಿದ್ದಾರೆ.

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗ ಕಾಂಗ್ರೆಸ್ ನಾಯಕರು ಭ್ರಷ್ಟಾಚಾರ ಎಸಗಿದ್ದಾರೆ ಎಂಬುದನ್ನು ಬಿಜೆಪಿ ಪಕ್ಷ ಹಾಗೂ ಸಾಮಾಜಿಕ ಹೋರಾಟಗಾರರು ಆರಂಭದಿಂದಲೂ ಹೇಳಿಕೊಂಡು ಬಂದಿದ್ದಾರೆ. ಅದನ್ನೇ ರಾಜ್ಯಪಾಲರು ಕೂಡ ಈ ಬಗ್ಗೆ ದೂರು ಬಂದಾಗ ಕಾನೂನು ತಜ್ಞರ ಸಲಹೆ ಪಡೆದು ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದರು. ಆಗಲೇ ಅವರು ರಾಜೀನಾಮೆ ಕೊಡಬೇಕಿತ್ತು. ಆದರೆ, ಗಂಭೀರ ತಪ್ಪುನಡೆಸಿದ ಬಳಿಕವೂ ಅಧಿಕಾರದ ಆಸೆಗೆ ಸಿಎಂ ಖುರ್ಚಿಗೆ ಅಂಟಿಕೊಂಡಿದ್ದಾರೆ. ಆಡಳಿತದಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನವರ ಭ್ರಷ್ಟಾಚಾರಕ್ಕೆ ಈಗ ಕಾನೂನೇ ತಕ್ಕ ಉತ್ತರ ಕೊಟ್ಟಿದೆ. ಇಷ್ಟಾಗಿಯೂ ಸಿಎಂ ಸ್ಥಾನದಲ್ಲಿ ಮುಂದುವರಿಯುವ ಯಾವ ನೈತಿಕತೆಯು ಸಿದ್ದರಾಮಯ್ಯನವರಿಗೆ ಇಲ್ಲ ಎಂದು ಚೌಟ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!