ಬೆಂಗಳೂರು : ಮುಡಾ ಹಗರಣದ (Muda Scam) ಬಳಿಕ ರಾಜ್ಯ ರಾಜಕಾರಣದಲ್ಲಿ ರಾಜೀನಾಮೆ ಜಟಾಪಟಿ ಜೋರಾಗಿ ಸದ್ದು ಮಾಡುತ್ತಿದೆ. ಇದರ ನಡುವೆಯೇ ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಅವರು ನಿನ್ನೆ ಎಸ್‌ಐಟಿ (SIT) ವಿಚಾರಣೆ ನಡೆಸಿದ್ದಾರೆ. ಇದರಿಂದ ಕೆರಳಿರುವ ಕುಮಾರಸ್ವಾಮಿ ಅವರು ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ (Lokayukta ADGP Chandrashekhar) ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

ವಿಶೇಷವಾಗಿ ಮಾನ್ಯತಾ ಟೆಕ್ ಪಾರ್ಕ್ (Manyata Tech Park) ಬಳಿ 38 ಫ್ಲೋರ್ ಮನೆ ಕಟ್ಟುತ್ತಿದ್ದಾರೆ. ಈ ಹಿಂದೆ ಚಂದ್ರಶೇಖರ್ ಮೇಲೆ ಎಫ್‌ಐಆರ್ ಆಗಿದೆ. ಅವರ ವಿರುದ್ಧ ತನಿಖೆ ಮಾಡಬೇಕು ಎಂದು ಹೆಚ್‌ಡಿಕೆ ಒತ್ತಾಯಿಸಿದರು.

ಹೆಚ್‌ಡಿಕೆ ಆರೋಪಕ್ಕೆ ಪತ್ರದ ಮೂಲಕ ಕೌಂಟರ್

ಸದ್ಯ, ಕುಮಾರಸ್ವಾಮಿ ಆರೋಪಕ್ಕೆ ಕೌಂಟರ್ ನೀಡಿರುವ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್, ಪತ್ರದ ಮೂಲಕ ತಮ್ಮ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಧೈರ್ಯ ನೀಡಿದ್ದಾರೆ. ಹಾಗೂ ಹೆಚ್‌ಡಿ ಕುಮಾರಸ್ವಾಮಿಯವರ ಆರೋಪಕ್ಕೆ ಕೌಂಟರ್ ಕೂಡ ನೀಡಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಕುಮಾರಸ್ವಾಮಿ ನನ್ನ ಮೇಲೆ ಸಾಕಷ್ಟು ಆರೋಪ ಮಾಡಿದ್ದಾರೆ. ಪ್ರಕರಣ ಒಂದರ ಆರೋಪಿ ಎಂದು ಪತ್ರ ಆರಂಭಿಸಿರುವ ಚಂದ್ರಶೇಖರ್. ನನ್ನ ಮೇಲೆ ಹೆಚ್‌ಡಿಕೆ ಸುಳ್ಳು ಆರೋಪದ ಜೊತೆಗೆ ಬೆದರಿಕೆ ಹಾಕಿದ್ದಾರೆ. ಎಸ್‌ಐಟಿ ಸಕ್ಷಮ ಪ್ರಾಧಿಕಾರದಿಂದ ಪ್ರಾಸಿಕ್ಯೂಷನ್ ಮಂಜೂರಾತಿ ಕೋರಿದೆ. ಆರೋಪಿ ಹೆಚ್ ಡಿ ಕುಮಾರಸ್ವಾಮಿ ಜಾಮೀನು ಪಡೆದಿದ್ದಾರೆ. ನಮ್ಮನ್ನ ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ ಎಂದು ಬರೆದಿದ್ದಾರೆ.

ಕುಮಾರಸ್ವಾಮಿಯಿಂದ ಭಯಗೊಳಿಸುವ ತಂತ್ರ

ಕುಮಾರಸ್ವಾಮಿ ಅವರು ನಮ್ಮ ಮೇಲೆ ಭಯ ಹುಟ್ಟಿಸುವ ಉದ್ದೇಶ ಹೊಂದಿದ್ದಾರೆ, ಎಷ್ಟೇ ಉನ್ನತ ಸ್ಥಾನದಲ್ಲಿದ್ರು ಆತನೊಬ್ಬ ಆರೋಪಿ, ಇಂತಹ ಆರೋಪ ಮತ್ತು ಬೆದರಿಕೆಗಳಿಂದ ನಾವು ನಿರಾಶೆಗೊಳ್ಳಬಾರದು ಎಸ್‌ಐಟಿ ಮುಖ್ಯಸ್ಥನಾಗಿ ನಾನು ಭಯವಿಲ್ಲದೆ ಕೆಲಸ ಮಾಡುತ್ತೇನೆ. ಪ್ರಕರಣದ ಸತ್ಯಾಸತ್ಯತೆ ಹೊರಗೆ ತರುತ್ತೇನೆ. ಎಲ್ಲಾ ಬಾಹ್ಯ ಪ್ರಭಾವದಿಂದ ನಿಮ್ಮನ್ನ ರಕ್ಷಿಸುತ್ತೇನೆ ಎಂದು ಎಸ್‌ಐಟಿ ಅಧಿಕಾರಿ, ಸಿಬ್ಬಂದಿಗಳಿಗೆ ಚಂದ್ರಶೇಖರ್ ಭರವಸೆ ನೀಡಿದ್ದಾರೆ.

ಜಾರ್ಜ್ ಬರ್ನಾರ್ಡ್ ಷಾ ವಾಕ್ಯ ಉಲ್ಲೇಖ

ಪತ್ರದಲ್ಲಿ ಜಾರ್ಜ್ ಬರ್ನಾರ್ಡ್ ಷಾ ಅವರ ಪ್ರಸಿದ್ಧ ಇಂಗ್ಲಿಷ್ ವಾಕ್ಯದ ಉಲ್ಲೇಖಿಸಿರುವ ಅವರು “ಹಂದಿಗಳೊಂದಿಗೆ ಎಂದಿಗೂ ಜಗಳಕ್ಕೆ ಇಳಿಯಬೇಡಿ, ಹಂದಿಗಳ ಜೊತೆಗೆ ಜಗಳಕ್ಕೆ ಇಳಿದರೆ ನಾವು ಕೊಳಕಾಗುತ್ತೀವಿ. ಯಾಕೆಂದರೆ ಹಂದಿಗಳು ಕೊಳಕನ್ನೇ ಇಷ್ಟಪಡುತ್ತದೆ”. ಆದರೆ ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸುತ್ತೇವೆ. ಅಪರಾಧಿಗಳು ಮತ್ತು ಆರೋಪಿಗಳನ್ನು ಎದುರಿಸುವುದನ್ನು ನಾವು ತಪ್ಪಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ನಾವು ಎದುರಿಸುವ ಅಪರಾಧಿಗಳು ಮತ್ತು ಆರೋಪಿಗಳು ನಮ್ಮ ಮೇಲೆ ಕೊಳಕು ಎಸೆಯುತ್ತಾರೆ ಎಂದು ಬರೆದಿದ್ದಾರೆ.

ಭರವಸೆ ಕಳೆದುಕೊಳ್ಳದೆ ಕೆಲಸ ಮಾಡಿ

ಇದು ನಮ್ಮ ಕರ್ತವ್ಯವನ್ನು ನಿರ್ವಹಿಸುವುದರಿಂದ ನಮ್ಮನ್ನು ತಡೆಯಬಾರದು. ಭರವಸೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ಏಕೆಂದರೆ ಸತ್ಯವು ಯಾವಾಗಲೂ ಜಯಗಳಿಸುತ್ತದೆ. ಸತ್ಯ, ದೇವರು ಮತ್ತು ನಮ್ಮ ಕಾನೂನಿನಲ್ಲಿ ನಂಬಿಕೆ ಇರಲಿ. ಸತ್ಯಮೇವ ಜಯತೆ ಎಂದು ಪತ್ರದ ಮೂಲಕ ಎಡಿಜಿಪಿ ಚಂದ್ರಶೇಖರ್ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!