ಪುತ್ತೂರು: “ಗಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಸಮಾನತೆ ಹಾಗೂ ಸಾಮರಸ್ಯ ತತ್ತ್ವಗಳು  ಸಾರ್ವಕಾಲಿಕವಾಗಿವೆ. ಗಾಂಧೀಜಿಯವರು ನಡೆಸಿದ ಸರಳ ಜೀವನ ನಮಗೆಲ್ಲ ದಾರಿದೀಪ. ಹಿಂಸೆ, ವಿಭಜನೆ, ಸಂಘರ್ಷಗಳೇ ಅಧಿಕವಾಗಿರುವ ಈ ಕಾಲಘಟ್ಟದಲ್ಲಿ ನಿಜವಾದ ಶಕ್ತಿಯು ಆಕ್ರಮಣಶೀಲತೆಯಲ್ಲಿಲ್ಲ ಬದಲಾಗಿ ಶಾಂತಿ, ಸಹನೆ ಹಾಗೂ ಸಹಾನುಭೂತಿಯಲ್ಲಿದೆ ಎಂಬುದನ್ನು ಎಲ್ಲರೂ ಮನಗಾಣಬೇಕು. ದೇಶ ಹಾಗೂ ಸಮಾಜದ ಅಭಿವೃದ್ಧಿಗಾಗಿ ಕಿಂಚಿತ್ತು ಸೇವೆಸಲ್ಲಿಸಬೇಕು. ಭಾರತದ ಎರಡನೇ ಪ್ರಧಾನಿಯಾದ ಲಾಲ್ ಬಹದ್ದೂರ್ ಶಾಸ್ತ್ರಿಯವರು ನಮ್ರತೆ ಮತ್ತು  ಸಮರ್ಪಣಾ ಮನೋಭಾವದ ನಾಯಕರಾಗಿದ್ದರು.  ಸರಳತೆ ಮತ್ತು  ನೈತಿಕತೆಗೆ ಹೆಸರುವಾಸಿಯಾದ ಶಾಸ್ತ್ರಿ ಜಿ   ತಮ್ಮ ಜೀವನದುದ್ದಕ್ಕೂ ನಿಸ್ವಾರ್ಥತೆ ಮತ್ತು ದೇಶಭಕ್ತಿಯ ಮೌಲ್ಯಗಳನ್ನು ಸಾಕಾರಗೊಳಿಸಿದರು. ನಮ್ಮ ರಾಷ್ಟ್ರವನ್ನು ರಕ್ಷಿಸುವ ಸೈನಿಕರು ಮತ್ತು ಅದನ್ನು ಪೋಷಿಸುವ ರೈತರ ಬಗ್ಗೆ   ಆಳವಾದ ಗೌರವವನ್ನು ಎತ್ತಿ ಹಿಡಿದ “ಜೈ ಜವಾನ್, ಜೈ ಕಿಸಾನ್” ಎಂಬ ಅವರ ಸ್ಪೂರ್ತಿದಾಯಕ ಘೋಷಣೆಗಾಗಿ ಶಾಸ್ತ್ರಿ ಜಿಯವರನ್ನು ಇಂದಿಗೂ ಸ್ಮರಿಸಲಾಗುತ್ತಿದೆ.  ಸ್ವಾವಲಂಬನೆಗೆ ಅವರು ನೀಡಿದ ಮಹತ್ವ ಮತ್ತು ಕೃಷಿ ಸುಧಾರಣೆಗಳಿಗೆ ಅವರ ಬೆಂಬಲವು ಭಾರತದ ಪ್ರಗತಿಗೆ ಭದ್ರ ಅಡಿಪಾಯವನ್ನು ಹಾಕಿದೆ”  “ ಎಂದು ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್‌ ಮೊಂತೇರೊ ಹೇಳಿದರು. ಅವರು ಸಂತ ಫಿಲೋಮಿನಾ ಕಾಲೇಜಿನ lಗಾಂಧೀ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.   ಕಳೆದ ಕೆಲವು ದಿನಗಳಿಂದ ಗಾಂಧೀ ಜಯಂತಿಯ ಸಲುವಾಗಿ ಆಯೋಜಿಸಿದ ವಿವಿಧ ಸ್ವಚ್ಛತಾ ಅಭಿಯಾನಗಳಲ್ಲಿ  ಪಾಲ್ಗೊಂಡ ಎನ್‌ ಎಸ್‌ ಎಸ್‌, ಎನ್‌ ಸಿ ಸಿ ಹಾಗೂ ಇತರ ಕ್ರಿಯಾತ್ಮಕ ಘಟಕಗಳ ವಿದ್ಯಾರ್ಥಿಗಳಿಗೆ ಹಾಗೂ ಸಂಯೋಜಕರಿಗೆ ಅಭಿನಂದನೆ ಸಲ್ಲಿಸಿದರು.  ನೆರೆದಿದ್ದ ಅತಿಥಿಗಳು ಹಾಗೂ ವಿದ್ಯಾರ್ಥಿಗಳು ಗಾಂಧೀಜಿಯವರ  ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಪ್ರಾಂಶುಪಾಲರು ಸ್ವಚ್ಚತೆಯ ಕುರಿತಾದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ  ರೆಜಿಸ್ಟ್ರಾರ್‌(ಅಕಾಡೆಮಿಕ್‌)  ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ| ನಾರ್ಬರ್ಟ್‌ ಮಸ್ಕರೇನಸ್‌ರವರು ಗಾಂಧೀ ಸ್ಮೃತಿ ನಡೆಸಿಕೊಟ್ಟರು. ಅವರು “ಈ ದಿನವು ಗಾಧೀಜಿಯವರು ತಮ್ಮ ಜೀವನದುದ್ದಕ್ಕೂ ಅನುಸರಿಸಿದ ಮೌಲ್ಯಗಳ ಬಗ್ಗೆ ಅವಲೋಕನ ಮಾಡುವ ದಿನ. ಅವರು ಸ್ವಾವಲಂಬನೆ ಮತ್ತು ಸರಳತೆಯ ಜೀವನ ಶ್ಯಲಿಯನ್ನು ಬಲವಾಗಿ ನಂಬಿದ್ದರು ಅಂತೆಯೇ ನಡೆದುಕೊಂಡರು. ಅವರ ದೂರದೃಷ್ಟಿ, ಪರಿಸರದ ಬಗೆಗಿನ ಕಾಳಜಿ, ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುವ ನೀತಿ ಮುಂತಾದ ವಿಷಯಗಳು ಇಂದಿಗೂ ಪ್ರಸ್ತುತ. ಗಾಂಧೀಜಿಯವರನ್ನು ಗೌರವಿಸುವ ಅತ್ಯುತ್ತಮ ಮಾರ್ಗವೆಂದರೆ ಅವರ ಮೌಲ್ಯಗಳನ್ನು ನಮ್ಮ ಕಾರ್ಯಗಳಲ್ಲಿ ಅಳವಡಿಸಿಕೊಳ್ಳುವುದು   “ ಎಂದು ಹೇಳಿದರು.
ಕಾಲೇಜಿನ ಪ್ರದರ್ಶನ ಕಲಾ ಘಟಕದ ವಿದ್ಯಾರ್ಥಿಗಳು  ಪ್ರಾರ್ಥಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ| ರಾಧಾಕೃಷ್ಣ ಗೌಡ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎನ್‌ ಸಿ ಸಿ ನೌಕಾ ದಳದ ಅಧಿಕಾರಿ ತೇಜಸ್ವಿ ಭಟ್‌ ವಂದಿಸಿದರು.   ಪ್ರದರ್ಶನ ಕಲಾ ಘಟಕದ ಸಂಯೋಜಕರು ಹಾಗೂ ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಶನ್‌ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರಶಾಂತ್‌ ರೈ  ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಡಾ| ವಿಜಯಕುಮಾರ್‌ ಎಂ, ಪರೀಕ್ಷಾಂಗ ಕುಲಸಚಿವರಾದ ಪ್ರೊ| ವಿನಯಚಂದ್ರ,  ಐಕ್ಯುಎಸಿ ಸಂಯೋಜಕರಾದ ಡಾ| ಮಾಲಿನಿ ಕೆ,    ಎನ್‌ ಸಿ ಸಿ ಅಧಿಕಾರಿ ಕ್ಯಾಪ್ಟನ್‌ ಜಾನ್ಸನ್‌ ಡೇವಿಡ್‌ ಸಿಕ್ವೇರಾ, ಪರೀಕ್ಷಾಂಗ ಉಪಕುಲಸಚಿವರಾದ ಅಭಿ಼ಷೇಕ್‌ ಸುವರ್ಣ, ಎನ್‌ ಎಸ್‌ ಎಸ್‌ ಯೋಜನಾಧಿಕಾರಿಗಳಾದ ಡಾ| ಚಂದ್ರಶೇಖರ್‌, ಪುಷ್ಪಾ ಎನ್‌,  ರೋವರ್ಸ್‌ ರೇಂಜರ್ಸ್‌ ಘಟಕಗಳ ಸಂಯೋಜಕರು, ಪ್ರಾಧ್ಯಾಪಕರು, ಎನ್‌ ಎಸ್‌ ಎಸ್‌ ಘಟಕಗಳ ಸ್ವಯಂಸೇವಕರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿ ಸ್ವಯಂಸೇವಕರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!