ಬೆಂಗಳೂರು : ಬೆಂಗಳೂರಿನಿಂದ ಗೋವಾಗೆ ತೆರಳುತ್ತಿದ್ದ ಇಂಡಿಗೋ ವಿಮಾನವೊಂದು ಇಂಧನ ಸಾಲದೇ ಹೋಗಿದ್ದರಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸಾಗಿರುವ ಘಟನೆ ಅಕ್ಟೋಬರ್ 8 ರಂದು ನಡೆದಿದೆ.
ಬೆಂಗಳೂರಿನಿಂದ ಸಂಜೆ ಸುಮಾರು 5:50ಕ್ಕೆ ಹೊರಟ ಏರ್‌ಬಸ್ A321 ಸಂಜೆ 6:45ರ ವೇಳೆಗೆ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು.
ಆದರೆ ಗೋವಾ ಪ್ರದೇಶದಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿದ್ದ ಹಿನ್ನೆಲೆ ಬೆಂಗಳೂರಿಗೆ ಹಿಂತಿರುಗಿಸಲಾಯಿತು. ಮಾತ್ರವಲ್ಲದೇ ವಿಮಾನದಲ್ಲಿ ಇಂಧನದ ಕೊರತೆಯೂ ಕಂಡುಬಂದ ಹಿನ್ನೆಲೆ ವಾಪಸಾಗಿದೆ.
ವಿಮಾನದಲ್ಲಿ 222 ಪ್ರಯಾಣಿಕರಿದ್ದು, ಗಂಟೆಗಟ್ಟಲೆ ಪರದಾಡುವಂತಾಯಿತು. ಬಳಿಕ ವಿಮಾನ ರಾತ್ರಿ ಸುಮಾರು 11 ಗಂಟೆಗೆ ಗೋವಾವನ್ನು ತಲುಪಿದೆ. ವಿಮಾನ ವಿಳಂಬ ಆಗಿದ್ದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನಾನುಕೂಲತೆಯಾಗಿದೆ.
ಹವಾಮಾನ ವೈಪರಿತ್ಯದಿಂದಾಗಿ ಗೋವಾ ಕಡೆಗೆ ಪ್ರಯಾಣಿಸುತ್ತಿದ್ದ ಇನ್ನೂ ಐದು ವಿಮಾನಗಳನ್ನು ಡೈವರ್ಟ್ ಮಾಡಲಾಗಿತ್ತು. ಈ ಪೈಕಿ ಎರಡು ವಿಮಾನಗಳು ಹೈದರಾಬಾದ್‌ಗೆ ತೆರಳಿದರೆ ಮೂರು ಬೆಂಗಳೂರಿಗೆ ವಾಪಸಾಗಿದೆ. ಬುಧವಾರ ಮಧ್ಯರಾತ್ರಿ 12:10 ರ ಸುಮಾರಿಗೆ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದಲ್ಲಿ ಸಾಮಾನ್ಯ ವಿಮಾನ ಕಾರ್ಯಾಚರಣೆಗಳು ಪುನರಾರಂಭಗೊಂಡಿದೆ.