ವಿಜಯಪುರ, (ಅಕ್ಟೋಬರ್ 14): ಕಟ್ಟರ್ ಹಿಂದುತ್ವವಾದಿ, ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮುಸ್ಲಿಂ ಮುಖಂಡರು ಸಿಡಿದೆದ್ದಿದ್ದಾರೆ. ನಾಳೆ (ಅಕ್ಟೋಬರ್ 15) ವಿಜಯಪುರದಲ್ಲಿ ವಕ್ಫ್ ಹಠಾವೋ ದೇಶ ಬಚಾವೋ ಆಂದೋಲನ ಪ್ರತಿಭಟನೆಗೆ ಯತ್ನಾಳ್ ಕರೆ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಮುಸ್ಲಿಂ ಮುಖಂಡರು, ನಿಮ್ಮ ರಾಜಕಾರಣ ಏನು ಇದೆಯೋ ಅದನ್ನು ಮಾಡಿಕೊಂಡು ಹೋಗಿ. ಇಲ್ಲದಿದ್ದರೆ ನವೆಂಬರ್ 6ರಂದು ನಿಮ್ಮ ಸಿಡಿ ಬಿಡುಗಡೆ ಮಾಡುವುದು ಗ್ಯಾರಂಟಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಾಳೆ ವಿಜಯಪುರದಲ್ಲಿ ವಕ್ಫ್ ಹಠಾವೋ ದೇಶ ಬಚಾವೋ ಆಂದೋಲನ ಪ್ರತಿಭಟನೆಗೆ ಕರೆ ನೀಡಿರುವ ಶಾಸಕ ಯತ್ನಾಳ್ ವಿರುದ್ಧ ಮುಸ್ಲಿಮರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಸಂಬಂಧ ವಿಜಯಪುರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಸ್ಲಿಂ ಮುಖಂಡರಾದ ಎಸ್ ಎಸ್ ಖಾದ್ರಿ ಸೇರಿದಂತೆ ಹಲವರು ಮಾತನಾಡಿ ಯತ್ನಾಳ್ಗೆ ಸಿಡಿ ಎಚ್ಚರಿಕೆ ಕೊಟ್ಟಿದ್ದಾರೆ.

ಈ ವೇಳೆ ಮಾತನಾಡಿದ ಎಸ್ ಎಸ್ ಖಾದ್ರಿ, ತಿ…… ಮುಚ್ಚಿಕೊಂಡು ರಾಜಕಾರಣ ಮಾಡಬೇಕು. ಇಲ್ಲದಿದ್ದರೆ ನವೆಂಬರ್ 06ರಂದು ಸಿಡಿ ಬಿಡುಗಡೆ ಮಾಡುವುದು ಖಚಿತ ಎಂದು ಎಚ್ಚರಿಕೆ ನೀಡಿದರು. ಇದಕ್ಕೆ ಧ್ವನಿಗೂಡಿಸಿದ ಮಾಜಿ ಕಾರ್ಪೊರೇಟರ್ ಅಬ್ದುಲ್ ರಜಾಕ್ ಹೊರ್ತಿ, ನಾನೇನು ಬ್ಲಾಕ್ಮೇಲ್ ಮಾಡುತ್ತಿಲ್ಲ. ಕೋರ್ಟ್ ನಿಂದ ತಮ್ಮ ವಿರುದ್ದ ಮಾನಹಾನಿ ವರದಿ ಪ್ರಸಾರ ಮಾಡದಂತೆ ತಡಯಾಜ್ಞೆ ತಂದಿದ್ದರ ಕುರಿತು ಯತ್ನಾಳಗೆ ಪ್ರಶ್ನಿಸಿ. ತಡೆಯಾಜ್ಞೆ ಯಾವುದಕ್ಕೆ ತಂದಿದ್ದಾರೆ ಎಂಬುದು ಯತ್ನಾಳ್ ಅವರಿಗೆ ಗೊತ್ತು ಎಂದು ವ್ಯಂಗ್ಯವಾಡಿದರು.

ಧರ್ಮಗುರು ಮೌಲಾನಾ ಸಯ್ಯದ್ ತನ್ವೀರ್ ಪೀರಾ ಹಾಶ್ಮಿ ಯಾವುದಕ್ಕೆ ತಡೆಯಾಜ್ಞೆ ತಂದಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ನೀಡದ ಮುಸ್ಲಿಂ ನಾಯಕರು, ಸ್ಟೇ ಕುರಿತು ಧರ್ಮಗುರುಗಳಿಗೆ ಕೇಳಬೇಕು ಎಂದರು.

ಪ್ರತಿಭಟನೆಗೆ ಕರೆ ಕೊಟ್ಟಿರುವ ಯತ್ನಾಳ್

ವಕ್ಫ್ ಕಾನೂನು ರದ್ದತಿಗೆ ಒತ್ತಾಯಿಸಿ ನಾಳೆ(ಅಕ್ಟೋಬರ್ 14) ವಿಜಯಪುರದಲ್ಲಿ ಬೃಹತ್ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವ ಪ್ರತಿಭಟನೆ ನಡೆಯಲಿದ್ದು, ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ, ಚಕ್ರವರ್ತಿ ಸೂಲಿಬೆಲೆ ಹಾಗೂ ಇತರರು ಭಾಗಿಯಾಗಲಿದ್ದಾರೆ. ಜಿಲ್ಲೆಯ 12000 ಎಕರೆ, ವಿಜಯಪುರ ತಾಲೂಕಿನ 2643 ಎಕರೆ ಆಸ್ತಿ ವಕ್ಪ ಎಂದು ಎಂಟ್ರಿ ಮಾಡಲು ಸಚಿವ ಜಮೀರ್ ಅಹ್ಮದ್ ಖಾನ್ ಆದೇಶಿಸಿದ್ದಾರೆ. ಸಂಘ-ಸಂಸ್ಥೆಗಳ, ದೇವಸ್ಥಾನಗಳ, ಸರ್ಕಾರಿ ಆಸ್ತಿ ಜಮೀನುಗಳನ್ನು ವಕ್ಪ್ ಆಸ್ತಿ ಎಂದು ಉತಾರೆಯಲ್ಲಿ ಎಂಟ್ರಿ ಮಾಡುವುದನ್ನು ಕೈಬಿಡುವಂತೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!