ಬೆಂಗಳೂರು : ‘ನಾನು ಯಾವುದೇ ಕಾರಣಕ್ಕೂ ಯಾರಿಗೂ ಬೆಂಡಾಗಲ್ಲ, ಮೈತ್ರಿ ಹಾಳಾಗಬಾರದು ಅಂತಾ ತಾಳ್ಮೆಯಿಂದ ಇದ್ದೀನಿ’ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸಿ.ಪಿ.ಯೋಗೇಶ್ವರ್ ಅವರ ಟಿಕೆಟ್ ಹಠದ ವಿಚಾರವಾಗಿ ಆಕ್ರೋಶ ಹೊರ ಹಾಕಿದರು.
ಚನ್ನಪಟ್ಟಣಕ್ಕೆ ಜೆಡಿಎಸ್ ಅಭ್ಯರ್ಥಿ ಆಯ್ಕೆ ಕುರಿತಾಗಿ ಚರ್ಚಿಸಲು ಇಂದು ನಡೆದ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಕ್ಷೇತ್ರ ನಮಗೆ ಬಿಜೆಪಿಯವರು ಬಿಟ್ಟುಕೊಟ್ಟು, ನಿಮ್ಮ ಪಕ್ಷ-ಚಿಹ್ನೆಯಡಿಯೇ ಅಭ್ಯರ್ಥಿಯನ್ನು ನಿಲ್ಲಿಸಿ ಎಂದು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕರೆ ಮಾಡಿ ಹೇಳಿದ್ದಾರೆ. ಯೋಗೇಶ್ವರ್ ಅವರನ್ನು ಜೆಡಿಎಸ್ ಗೆ ಸೇರಿಸಿ ಅಂತಲೂ ಸಲಹೆ ನೀಡಿದ್ದಾರೆ.
ಆದರೆ, ನಮ್ಮ ಪಕ್ಷದ ಚಿಹ್ನೆ ಅಡಿ ಅವರು ನಿಲ್ಲಲು ಒಪ್ಪುತ್ತಿಲ್ಲ. ನಮ್ಮಿಂದಲೇ ಬೆಳದವರು ಜೆಡಿಎಸ್ ಪಕ್ಷವನ್ನು ಮುಗಿಸಲೇ ಬೇಕು ಅಂತಲೇ ಈ ಧೋರಣೆ ತಾಳುತ್ತಿದ್ದಾರೆ ಎಂದು ಹೆಚ್ಡಿಕೆ ಕಿಡಿಕಾರಿದರು. ನಾವು ಈಗ ಅಗ್ನಿ ಪರೀಕ್ಷೆಯಲ್ಲಿದ್ದೇವೆ. ಎಲ್ಲಾ ಭಗವಂತ ನೋಡಿಕೊಳ್ಳುತ್ತಾನೆ. ನಾವು ಚುನಾವಣೆಗೆ ಹೆದರಲ್ಲ. ನೋಡೋಣ ಇನ್ನೂ ಮೂರು ದಿನ ಸಮಯವಿದೆ ಎಂದ ಹೆಚ್ಡಿಕೆ, ಟಿಕೆಟ್ ವಿಚಾರ ಗುಟ್ಟಾಗಿಯೇ ಇಟ್ಟು ಮಾತು ಮುಗಿಸಿದರು.