ರಾಮನಗರ : ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ-ಜೆಡಿಎಸ್ ನಡುವೆ ಟಿಕೆಟ್ ಕಗ್ಗಂಟು ಕೊನೆಗೂ ಸಿ.ಪಿ.ಯೋಗೇಶ್ವರ್ ಅವರು ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಇನ್ನು ಸಡಿಲವಾಗಿಲ್ಲ.
ಸಭೆಯ ಮೂಲಕ ಜೆಡಿಎಸ್ ಮುಖಂಡರ ಅಭಿಪ್ರಾಯವನ್ನು ಸಂಗ್ರಹಿಸಿಯೇ ನಾಳೆ ಬೆಳಗ್ಗೆಯೇ ಚನ್ನಪಟ್ಟಣಕ್ಕೆ ಅಭ್ಯರ್ಥಿಯನ್ನು ಘೋಷಿಸಲು ಜೆಡಿಎಸ್ ಮುಂದಾದರೆ, ನಾನೂ ಸಹ ನಾಳೆ ಬೆಳಗ್ಗೆವರೆಗೂ ಕಾದು ನೋಡಿ ತೀರ್ಮಾನಿಸುವೆ ಎಂದು ಇತ್ತ ಯೋಗೇಶ್ವರ್ ಅವರೂ ಮುಂಜಾನೆ ಮಂತ್ರಕ್ಕೆ ಮೊರ ಹೋದಂತಿದೆ.
ಚನ್ನಪಟ್ಟಣದಿಂದ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಯೋಗೇಶ್ವರ್ ಅವರಿಗೆ ಟಿಕೆಟ್ ಬಿಟ್ಟಕೊಡಲು ಜೆಡಿಎಸ್ ವಿರೋಧ ವ್ಯಕ್ತಪಡಿಸಿದ್ದಕ್ಕೆ, ನಾನು ಪಕ್ಷೇತರವಾಗಿ ನಿಲ್ಲಲು ತೀರ್ಮಾನಿಸಿದ್ದೇನೆ. ಆದರೆ ತಮ್ಮನ್ನು ನಾಳೆಯವರೆಗೆ ಎನ್ಡಿಎ ಅಭ್ಯರ್ಥಿಯನ್ನಾಗಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಭರವಸೆಯನ್ನು ನೀಡಿದ್ದಾರೆ. ಹೀಗಾಗಿಯೇ ಬೆಳಗ್ಗೆವರೆಗೆ ಕಾದು ನೋಡಿಯೇ ನನ್ನ ಕೊನೆಯ ನಿರ್ಧಾರ ಪ್ರಕಟಿಸುವೆ ಎಂದು ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ.
ಇತ್ತ ದೇವೇಗೌಡರು, ಕುಮಾರಸ್ವಾಮಿ ಹಾಗೂ ನಿಖಿಲ್ ಅವರನ್ನು ತಮ್ಮ ಮನೆಗೆ ಕರೆಸಿಕೊಂಡು ಚನ್ನಪಟ್ಟಣದಿಂದ ಸ್ಪರ್ಧಿಸುವಂತೆ ನಿಖಿಲ್ಗೆ ಮನವೊಲಿಸುವ ಪ್ರಯತ್ನ ವಿಫಲವಾಗಿದೆ. ಹೀಗಾಗಿ ನಾಳೆ ಬೆಳಗ್ಗೆಯೇ ಚರ್ಚಿಸಿ ಅಭ್ಯರ್ಥಿ ಫೈನಲ್ ಮಾಡುತ್ತೇವೆ ಎಂದು ದಳಪತಿಗಳು ಸಿದ್ಧರಾಗಿದ್ದಾರೆ.
ಹಿಗಾಗಿ ಯೋಗೇಶ್ವರ್ ಹಾಗೂ ಕುಮಾರಸ್ವಾಮಿ ಬಿಜೆಪಿ-ಜೆಡಿಎಸ್ ಅಂತಿಮ ನಿರ್ಧಾರ ನಾಳೆಯೇ ಗೊತ್ತಾಗಲಿದ್ದು, ಅದಾದ ನಂತರವೇ ಕಾಂಗ್ರೆಸ್ ತನ್ನ ಅಭ್ಯರ್ಥಿಯಾರೆಂದು ಅಧಿಕೃತವಾಗಿ ಘೋಷಿಸಲು ಪ್ಲ್ಯಾನ್ ಮಾಡಿಕೊಂಡು ಕುಳಿತಿದೆ. ದೋಸ್ತಿ ನಾಯಕರದ್ದು ಮುಗಿದ ನಂತರವೇ ಬಾಕಿ ಇರುವ ನಮ್ಮ ಪಿಕ್ಚರ್ ಏನು ಅಂತಾ ತೋರಿಸ್ತೀವಿ ಎಂದು ಕಾಂಗ್ರೆಸ್ ರೆಡಿಯಾಗಿ ನಿಂತಿದೆ.