
ಪುತ್ತೂರು; ಎರಡು ಸಲ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಶಾಸಕರಾಗಿ ಬಳಿಕ ಕಾಪು ಕ್ಷೇತ್ರಕ್ಕೆ ವಲಸೆ ಹೋಗಿದ್ದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮತ್ತೆ ಪುತ್ತೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರಾ ಎಂಬುವುದು ಇದೀಗ ಹೊಸ ಸುದ್ದಿಯಾಗಿ ಚಾಲನೆ ಪಡೆಯುತ್ತಿದೆ. ಮುಂದಿನ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸೊರಕೆ `ಮೆಘಾ ಎಂಟ್ರಿ’ಗೆ ಅಡಿಪಾಯ ತಯಾರಾಗುತ್ತಿದೆ ಎನ್ನುವುದು ತೆರೆಯ ಮರೆಯ ಸುದ್ದಿಯಾಗಿ ಹರಿದಾಡಲಾರಂಭಿಸಿದೆ.
ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರಾಗಿ ಪುತ್ತೂರಿನಲ್ಲಿ ಗೆಲುವು ಸಾಧಿಸಿದ ಕೊನೆಯ ಶಾಸಕ ವಿನಯಕುಮಾರ್ ಸೊರಕೆ. ಅವರ ಬಳಿಕ ಯಾವ ಕಾಂಗ್ರೇಸ್ ನಾಯಕರೂ ಇಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಆಮೇಲೆ ಪುತ್ತೂರು ವಿಧಾನಸಭಾ ಕ್ಷೇತ್ರ ಸಂಪೂರ್ಣವಾಗಿ ಬಿಜೆಪಿ ಮಯವಾಗಿ ಬದಲಾಗಿತ್ತು. ಇಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಮಾತ್ರ ಗೆಲುವು ಸಾಧಿಸಲು ಸಾಧ್ಯ ಎಂಬ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಬಿಜೆಪಿ ಪಕ್ಷದಿಂದ ಶಾಸಕರಾಗಿ ಗೆಲುವು ಸಾಧಿಸಿದ್ದ ಶಕುಂತಳಾ ಶೆಟ್ಟಿ ಬಿಜೆಪಿ ಜತೆಗೆ ಮುನಿಸುಗೊಂಡು ಕಾಂಗ್ರೆಸ್‌ಗೆ ವಲಸೆ ಬಂದು ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಕ್ಷಕ್ಕೆ ಗೆಲುವಾಗಿತ್ತು. ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿಯ ಅಭ್ಯರ್ಥಿ ಸಂಜೀವ ಮಠಂದೂರು ಗೆಲುವಿನ ಮೂಲಕ ಕಾಂಗ್ರೇಸ್ ವಿರುದ್ಧ ಬಿಜೆಪಿ ಸೇಡು ತೀರಿಸಿಕೊಂಡಿತ್ತು.
ಕಳೆದ ೨೦೨೩ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಕಾಂಗ್ರೇಸಿಗೆ ವಲಸೆ ಬಂದ ಬಿಜೆಪಿ ಮುಖಂಡ ಅಶೋಕ್ ರೈ ಕೋಡಿಂಬಾಡಿ ಪ್ರಯಾಸದ ಗೆಲುವು ಸಾಧಿಸುವ ಮೂಲಕ ಕಾಂಗ್ರೇಸ್ ಬಾವುಟವನ್ನು ಮೇಲಕ್ಕಿತ್ತಿದರು. ಆದರೆ ಇವರಿಬ್ಬರೂ ಬಿಜೆಪಿಯಲ್ಲಿ ಅವಕಾಶ ವಂಚಿತರಾಗಿ ಕಾಂಗ್ರೇಸ್ ಕೊಡೆಯಡಿಯಲ್ಲಿ ನಿಂತು ಗೆದ್ದವರು.
ರಾಜಕೀಯದಲ್ಲಿ ಯಾವುದೂ ಅಸಾಧ್ಯವಲ್ಲ..
ಕಳೆದ ಚುನಾವಣೆಯಲ್ಲಿ ಬಿಜೆಪಿಯ ಹಾಲಿ ಶಾಸಕ ಸಂಜೀವ ಮಠಂದೂರು ಅವರಿಗೆ ಬಿಜೆಪಿ ಪಕ್ಷ ಅವಕಾಶ ನಿರಾಕರಿಸಿತ್ತು. ಇದರ ನಡುವೆ ಪ್ರಭಲ ಆಕಾಂಕ್ಷಿಯಾಗಿದ್ದ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಅಭ್ಯರ್ಥಿಯಾಗುವಲ್ಲಿ ವಿಫಲಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬಿಜೆಪಿಯ ಅತೀ ಆತ್ಮವಿಶ್ವಾಸದ ಫಲವಾಗಿ ಮೂಲೆಯಲ್ಲಿದ್ದ ಆಶಾ ತಿಮ್ಮಪ್ಪ ಗೌಡರಿಗೆ ಹಾಕಿದ `ಮಣೆ’ ಬಿಜೆಪಿ ಪಾಲಿಗೆ ದೊಡ್ಡ ತಿರುಗೇಟು ನೀಡಿತ್ತು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಹಾಲಿ ಶಾಸಕರಿಗೆ ಟಿಕೆಟ್ ಸಿಗುತ್ತದೆ ಎಂಬುವುದು ಗ್ಯಾರಂಟಿ ಏನಲ್ಲ. ಹಾಗಾಗಿ ವಿನಯಕುಮಾರ್ ಸೊರಕೆ `ರೀ ಎಂಟ್ರಿ’ ಅಸಾಧ್ಯವೂ ಅಲ್ಲ. ಯಾಕೆಂದರೆ ಇಂದಿನ ರಾಜಕೀಯದಲ್ಲಿ ಯಾವುದೂ ಅಸಾಧ್ಯವಲ್ಲ..
ಈ ಹಿನ್ನಲೆಯಲ್ಲಿಯೇ ಮುಂದಿನ ಚುನಾವಣೆಗೆ ಸೊರಕೆ ಎಂಟ್ರಿಗೆ ಮುನ್ನುಡಿ ಬರೆಯಲಾಗುತ್ತಿದೆ ಎನ್ನಲಾಗುತ್ತಿದೆ. ಈ ನಡುವೆ ಬಿಜೆಪಿಯಿಂದ ವಲಸೆ ಬಂದ ಅಶೋಕ್ ರೈ ಕಾಂಗ್ರೇಸ್ ಪಕ್ಷದ ಶಾಸಕರಾಗಿದ್ದರೂ ಬಿಜೆಪಿ ಪರ ನಿಲುವು ಹೊಂದಿದ್ದಾರೆ. ಮುಂದೆ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಯತ್ತ ದೃಷ್ಠಿ ಇಟ್ಟಿದ್ದಾರೆ. ಆರ್‌ಎಸ್‌ಎಸ್-ಹಿಂದೂ ಪರ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಕಾಂಗ್ರೇಸ್ ಶಾಸಕರಿಗೆ ವಿವೇಕಾನಂದ ಕಾಲೇಜಿನ ಕಾರ್ಯಕ್ರಮಗಳಲ್ಲಿ ಕುಳಿತುಕೊಳ್ಳುವ ಅವಕಾಶ `ಗಗನಕುಸುಮ’ವಾಗಿದ್ದರೂ ಅಶೋಕ್ ರೈ ಪಾಲಿಗೆ ದೊರಕುತ್ತಿದೆ ಎಂಬ ವಿಚಾರಗಳು ಶಾಸಕ ಅಶೋಕ್ ರೈ ಅವರ `ಸ್ಪಷ್ಟನೆ’ಯ ನಡುವೆಯೂ ಗಟ್ಟಿಯಾಗುತ್ತಿದೆ. ಇದು ಸೊರಕೆ ಎಂಟ್ರಿಗೆ ಸುಗಮಹಾದಿಯಾಗುವ ಅವಕಾಶವನ್ನು ಸೃಷ್ಟಿಸುತ್ತಿದೆ ಎಂಬುವುದನ್ನು ಅಲ್ಲಗಳೆಯುವ ಹಾಗಿಲ್ಲ.
ಕಳೆದ ಬಾರಿಯ ಕಾಂಗ್ರೇಸ್ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಎರಡು ಸಮುದಾಯದ ಮತದಾರರು ಎಂಬುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ. ಅಶೋಕ್ ರೈ ಅವರ ಜತೆಗೇ ನಿಂತುಕೊAಡು ಬ್ಯಾಟ್ ಪರ ಓಟು ಮಾಡಿದವರು-ಮಾಡಿಸಿದವರು ಅಚ್ಚರಿ ಪಡುವಂತೆ ಗೆದ್ದ ಅಶೋಕ್ ರೈ ಈಗ ತನ್ನ ಪರವಾಗಿ ನಿಂತ ಮತದಾರರ ಒಲವು ಕಳೆದುಕೊಳ್ಳುತ್ತಿದ್ದಾರೆ ಎಂಬುವುದರಲ್ಲಿಯೂ ಯಾವುದೇ ಗುಟ್ಟಿಲ್ಲ. ಈ ವಿಚಾರವೂ ವಿನಯಕುಮಾರ್ ಸೊರಕೆ ಪಾಲಿಗೆ ಮೃಷ್ಟಾನ್ನ ಭೋಜನವಾಗುವ ಚಾನ್ಸ್ ಹಿನ್ನಲೆಯಲ್ಲಿಯೇ ಸೊರಕೆ ಮೆಘಾ ಎಂಟ್ರಿ ಹೆಚ್ಚು ನಂಬಿಕೆಯ ಸುದ್ದಿಯಾಗಿ ಹರಿದಾಡಲಾರಂಭಿಸಿದೆ.









