
ಪುತ್ತೂರು; ಇಲ್ಲೊಂದು ಸಮಸ್ಯೆ ಖಂಡಿತಾ ಇದೆ. ಯಾಕೆಂದರೆ ಇಲ್ಲಿ ಅಧ್ಯಕ್ಷರಾದವರು ಬಳಿಕ ಬಹುತೇಕ ರಾಜಕೀಯವಾಗಿ ಮೂಲೆಗುಂಪಾಗಿಬಿಡುತ್ತಾರೆ ಎಂಬುವುದು ಪ್ರತೀತಿ. ಇದೀಗ ಈ ಕಚೇರಿಯ ಸ್ವಾಗತ ಕಮಾನಿಗೂ ಅದೇ ಸ್ಥಿತಿ ಬಂದಿದೆ. ಇನ್ನೇನು ಯಾರ ತಲೆಯ ಮೇಲಾದರೂ ಬಿದ್ದು ಬಿಡುವ ಪರಿಸ್ಥಿತಿಯಲ್ಲಿದೆ ಈ ಕಮಾನು. ಎಚ್ಚರವಿರಲಿ. ಈ ಭಾಗದಿಂದ ಹೋಗುವವರು ಖಂಡಿತಾ `ಜೀವವಿಮೆ’ ಮಾಡಿಸಿಕೊಳ್ಳಲೇ ಬೇಕು. ಯಾರ ಮೇಲಾದರೂ ಬಿದ್ದರೆ ( ಹಾಗಾಗದಿರಲಿ..!) ಅವರಿಗೆ ಪರಿಹಾರವೂ ಸಿಗಲ್ಲ.
ಇದು ಪುತ್ತೂರು ಮುಖ್ಯ ರಸ್ತೆಯಿಂದ (ಅರುಣಾ ಕಲಾಮಂದಿರ ಹತ್ತಿರ) ಎಪಿಎಂಸಿ ರಸ್ತೆಗೆ ತಿರುಗುವಲ್ಲಿ ಹಾಕಲಾದ ಎಪಿಎಂಸಿಯ ಸ್ವಾಗತ ಕಮಾನು. ಸರ್ಕಾರಿ ಕಚೇರಿಯ ಸ್ವಾಗತ ಕಮಾನೊಂದು ತುಕ್ಕು ಹಿಡಿದ ಸ್ಥಿತಿಯಲ್ಲಿ ಕಳೆದ ಹಲವು ವರ್ಷಗಳಿಂದ ಜನತೆಯ ಕಣ್ಣು ಕುಕ್ಕುತ್ತಿದೆ. ಆದರೆ ಇದರ ಜವಾಬ್ದಾರಿ ಹೊತ್ತವರಿಗೆ ಮಾತ್ರ ಕಾಣುತ್ತಿಲ್ಲ ಅಷ್ಟೇ.
ಸುಮಾರು ವರ್ಷಗಳ ಹಿಂದೆ `ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪುತ್ತೂರು ದಕ’ ಎಂದು ನಾಮಾಂಕಿತ ಬೋರ್ಡು ಹಾಕಲಾಗಿದೆ. ಈ ಕಮಾನು ಪ್ರಸ್ತುತ ತುಕ್ಕು ಹಿಡಿದಿದೆ. ಇನ್ನೂ ಕೆಲ ಕಾಲ ಹಾಗೆಯೇ ಉಳಿದರೆ ಕುಸಿದು ಬೀಳುವುದರಲ್ಲಿ ಯಾವ ಅನುಮಾನವೂ ಬೇಡ. ಈ ಕಮಾನನ್ನು ಉಳಿಸಿಕೊಳ್ಳಬೇಕಾದರೆ ಕನಿಷ್ಠ ಇದಕ್ಕೆ ಪೈಂಟ್ ಹೊಡೆಯಬೇಕು. ಆದರೆ ಈ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು..!
ಪುತ್ತೂರು ಎಪಿಎಂಸಿಗೆ ಆದಾಯದ ಕೊರತೆ ಇಲ್ಲ.
ಸರ್ಕಾರದಿಂದಲೂ ಅನುದಾನ ಬರುತ್ತಿದೆ. ಇರೋದೊಂದೇ ಇಚ್ಛಾಶಕ್ತಿಯ ಕೊರತೆ. ಎಪಿಎಂಸಿಗೆ ಚುನಾವಣೆ ನಡೆಯದೆ ಇಲ್ಲಿ ಈಗ ಆಡಳಿತ ಸಮಿತಿ ಇಲ್ಲ. ಆಡಳಿತಾಧಿಕಾರಿ ಆಡಳಿತದಲ್ಲಿ ಎಪಿಎಂಸಿ ಕಾರ್ಯ ನಡೆಯುತ್ತಿದೆ. ಆಡಳಿತ ಸಮಿತಿ ಇದ್ದಾಗಲೂ ಈ ಕಮಾನಿನ ಮೇಲೆ ಯಾರ ಕಣ್ಣೂ ಬಿದ್ದಿರಲಿಲ್ಲ. ಈಗಂತೂ ಸರ್ಕಾರಿ ಅಧಿಕಾರಿ ವರ್ಗ ಮಾತ್ರ ಅವರ ಕಣ್ಣಂತೂ ಇಲ್ಲಿಗೆ ಬೀಳುವ ಸಾಧ್ಯತೆ ಕಂಡುಬರುತ್ತಿಲ್ಲ. ಜನಪ್ರತಿನಿಧಿಗಳಾದರೂ ಈ ಎಪಿಎಂಸಿ ರಸ್ತೆಗೆ ಹೋಗುವಾಗ ಒಮ್ಮೆ ಕಣ್ಣೆತ್ತಿ ನೋಡಬೇಕಾಗಿದೆ.
ಜನನಿಬಿಡ ಜಾಗ
ಮುಖ್ಯರಸ್ತೆಯಿಂದ ಎಪಿಎಂಸಿಗೆ ತಿರುಗುವ ಈ ಜಾಗ ಯಾವಾಗಲೂ ಜನನಿಬಿಡ ಸ್ಥಳ. ಇಲ್ಲಿ ವಾಹನಗಳ ಓಡಾಟ ನಿರಂತರ. ಅಕ್ಕಪಕ್ಕದಲ್ಲಿ ಕಟ್ಟಡಗಳು. ಇದರ ಬದಿಯಲ್ಲಿಯೇ ಅಟೋ ರಿಕ್ಷಾ ತಂಗುದಾಣವೂ ಇದೆ. ಅಂಗಡಿ ವ್ಯಾಪಾರಿಗಳ ತಾಣವೂ ಹೌದು. ಹಾಗಾಗಿ ಅಪಾಯ ಸಂಭವಿಸುವ ಮೊದಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.
