

ಪುತ್ತೂರು; ಕಡಲತೀರದ ಭಾರ್ಗವ ಖ್ಯಾತಿಯ ಡಾ.ಶಿವರಾಮ ಕಾರಂತರ ಕರ್ಮಭೂಮಿ ಪುತ್ತೂರಿನ ಪರ್ಲಡ್ಕದ ಬಾಲವನ. ಇದೊಂದು ಪ್ರಕೃತಿಯ ಪಾಠಶಾಲೆ. ಡಾ.ಕಾರಂತರ ಎಲ್ಲಾ ಚಟುವಟಿಕೆಗಳಿಗೂ ಬಾಲವನ ಹಂದರ. ಈ ಬಾಲವನವನ್ನು ಕಾರಂತರು ತೊರೆದ ನಂತರ ಇಲ್ಲಿ ಸ್ವಲ್ಪಕಾಲ ಯಾವುದೇ ಚಟುವಟಿಕೆಗಳೂ ನಡೆಯಲಿಲ್ಲ. ಇದೊಂದು ಕಾಡಾಗಿ ಪರಿವರ್ತಿತಗೊಂಡಿತ್ತು. ಬಳಿಕ ಪುತ್ತೂರಿನ ಸಾಹಿತ್ಯಾಸಕ್ತರ ಉತ್ತೇಜನದಿಂದ ಅಧಿಕಾರಿ ವರ್ಗದ ಶ್ರಮದಿಂದ ಮತ್ತೆ ಚೈತನ್ಯ ಪಡೆದುಕೊಂಡಿತ್ತು. ಇಲ್ಲೊಂದು ಪುಟ್ಟ ಮಕ್ಕಳ ಆಟಕ್ಕಾಗಿ ನಿರ್ಮಿಸಿದ ಪಾರ್ಕ್ ಇದೆ. ಇದರಲ್ಲಿ ಜಾರು ಬಂಡಿ,ಉಯ್ಯಾಲೆ ಮತ್ತಿತರ ಕ್ರೀಡಾಸಕ್ತಿಯ ಆಟಿಕೆ ಸಾಮಾಗ್ರಿಗಳಿವೆ.
ಆದರೆ ಎಷ್ಟೋ ವರ್ಷಗಳ ಹಿಂದೆ ಮಾಡಿರುವ ಈ ಮಕ್ಕಳ ಆಟಿಕೆಗಳು ಈಗ ತಮ್ಮ ಶಕ್ತಿಯನ್ನು ಕಳೆದುಕೊಂಡಿವೆ. ಬಹಳಷ್ಟು ಗೇಮ್ಸ್ ಐಟಂಗಳಲ್ಲಿ ಮಕ್ಕಳು ಆಟ ಆಡದಂತಹ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಲ್ಲಿ ತೂತುಬಿದ್ದು ಮಕ್ಕಳಿಗೆ ಅಪಾಯ ತರುವ ಸ್ಥಿತಿಯಲ್ಲಿವೆ. ಕಬ್ಬಿಣದ ಈ ಆಟಿಕೆಗಳು ತುಕ್ಕು ಹಿಡಿದಿವೆ.
ಮಕ್ಕಳ ಆಟ ಬೇಡ ಮನವಿ
ಈ ಹಿನ್ನಲೆಯಲ್ಲಿ ಈ ಪಾರ್ಕಿನಲ್ಲಿ ಮಕ್ಕಳ ಆಟಿಕೆಗಳಲ್ಲಿ ಆಟವಾಡದಂತೆ ಬಾಲವನ ಆಡಳಿತ ಮನವಿ ಮಾಡಿದೆ. ಆಟದ ಸಾಮಾಗ್ರಿಗಳು ತುಕ್ಕು ಹಿಡಿದ ಕಾರಣ ಮಕ್ಕಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಈ ಬಗ್ಗೆ ಇಲ್ಲಿನ ಉಸ್ತುವಾರಿ ವ್ಯವಸ್ಥೆಗೆ ಸ್ಪಷ್ಟ ಸಂದೇಶ ನೀಡಲಾಗಿದೆ. ಯಾವುದೇ ಕಾರಣಕ್ಕೆ ಮಕ್ಕಳಿಗೆ ಮುಂದಿನ ಮಾರ್ಚ್ ತನಕ ಆಟ ಆಡದಂತೆ ನೋಡಿಕೊಳ್ಳಲು ಅಧಿಕಾರಿ ವರ್ಗಕ್ಕೆ ಮಾಹಿತಿ ನೀಡಲಾಗಿದೆ.
೧೨ ಲಕ್ಷ ವೆಚ್ಚದಲ್ಲಿ `ಹೊಸತನ’
ಈಗಾಗಲೇ ಮಕ್ಕಳ ಆಟಿಕೆಗಳು ತುಕ್ಕು ಹಿಡಿದಿರುವ ವಿಚಾರವನ್ನು ಗಮನಿಸಲಾಗಿದೆ. ನಗರೋತ್ಥಾನ ಯೋಜನೆಯಡಿ ರೂ.೧೨ ಲಕ್ಷ ವೆಚ್ಚದಲ್ಲಿ ಈ ಮಕ್ಕಳ ಪಾರ್ಕಿನಲ್ಲಿ ಸಂಪೂರ್ಣ ಹೊಸ ಆಟಿಕೆಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ. ಈ ಅನುದಾನ ಬಿಡುಗಡೆಗಾಗಿ ಈಗಾಗಲೇ ಮೂರುಹಂತಗಳ ಕೆಲಸ ಮುಗಿದಿದೆ. ಇದಕ್ಕಾಗಿ ೧೨ ಲಕ್ಷ ವೆಚ್ಚದಲ್ಲಿ `ಹೊಸತನ’ ನಿರ್ಮಾಣಕ್ಕೆ ಮುಂದಿನ ಮಾರ್ಚ್ ತಿಂಗಳ ಒಳಗಾಗಿ ವ್ಯವಸ್ಥೆ ಮಾಡಲಾಗುವುದು. ಅಲ್ಲಿ ತನಕ ಮಕ್ಕಳ ಆಟಿಕೆಗಳಲ್ಲಿ ಆಟವಾಡದಂತೆ ನೋಡಿಕೊಳ್ಳಲು ಮಕ್ಕಳ ಪೋಷಕರಲ್ಲಿಯೂ ಬಾಲವನ ಆಡಳಿತ ವಿನಂತಿ ಮಾಡಿದೆ.
ವರ್ಲಿ ಚಿತ್ರಕಲೆಯ ಶೃಂಗಾರ
ಬಾಲವನವನ್ನು ಮತ್ತಷ್ಟು ಆಕರ್ಷಣೀಯಗೊಳಿಸುವ ಉದ್ದೇಶದಿಂದ ಬಾಲವನ ದ್ವಾರದಿಂದ ಒಳಭಾಗದ ಗೋಡೆಗಳಲ್ಲಿ ವರ್ಲಿ ಚಿತ್ರಕಲೆಯ ಶೃಂಗಾರ ಮಾಡಲಾಗುವುದು. ಬಾಲವನವನ್ನು ಜನಾಕರ್ಷಣೆಯ ತಾಣವನ್ನಾಗಿಸಲು ಈ ಚಿಂತನೆ ಮಾಡಲಾಗಿದೆ. ನಗರಸಭೆ ವತಿಯಿಂದ ಈ ಚಿತ್ರಕಲೆಯ ವ್ಯವಸ್ಥೆ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ ಎಂದು ಬಾಲವನ ಆಡಳಿತ ಸಮಿತಿ ಕಾರ್ಯದರ್ಶಿ ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರ ತಿಳಿಸಿದ್ದಾರೆ.
ಮಕ್ಕಳ ಆಟಿಕೆಯಲ್ಲಿ ಯುವಕರ ಆಟ
ಇಲ್ಲಿ ಈಗಾಗಲೇ ಅಳವಡಿಸಲಾದ ಆಟಿಕೆಗಳ ಪಕ್ಕದಲ್ಲಿ ೧೨ ವರ್ಷದೊಳಗಿನ ಮಕ್ಕಳು ಮಾತ್ರ ಆಟಿಕೆಗಳನ್ನು ಬಳಸುವಂತೆ ಸೂಚನೆ ನೀಡಲಾಗಿದ್ದರೂ ಇಲ್ಲಿಗೆ ಬರುವ ಯುವಕರು ಇದೇ ಆಟಿಕೆಗಳಲ್ಲಿ ಕುಳಿತು ಆಟವಾಡುತ್ತಾರೆ. ಇದರಿಂದ ಈ ಆಟಿಕೆಗಳು ಬೇಗ ಹಾಳಾಗುತ್ತಿವೆ. ಯುವಕರಲ್ಲಿ ಈ ಆಟಿಕೆಗಳು ಮಕ್ಕಳಿಗಾಗಿ ನೀವು ಆಟವಾಡಬೇಡಿ ಎಂದು ಹೇಳಿದರೆ, ನಾವು ರೂ.೧೫ ಕೊಟ್ಟು ಬಂದಿದ್ದೇವೆ. ಆಟ ಆಡುತ್ತೇವೆ ಎನ್ನುತ್ತಾರೆ ಎಂದು ಇಲ್ಲಿನ ಸಿಬಂದಿಗಳು ಮಾಹಿತಿ ನೀಡುತ್ತಾರೆ.
