ಇಲ್ಲಿನ ಪಿಎಲ್‌ಡಿ ಬ್ಯಾಂಕ್‌ನ ಚುನಾವಣೆಗೆ ಸಂಬಂಧಿಸಿ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಬೆಂಬಲಿತ ಇಬ್ಬರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದ್ದು, ಈ ಸಂಬಂಧ ಬ್ಯಾಂಕ್‌ಗೆ ಭಾನುವಾರ ತೆರಳಿದ ಶಾಸಕ ಅಶೋಕ್‌ಕುಮಾರ್ ರೈ ಅವರು ಚುನಾವಣಾ ಅಧಿಕಾರಿಯನ್ನು ತರಾಟೆ ತೆಗೆದುಕೊಂಡು ಅಮಾನತು ಮಾಡುವ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ರಾಜಶೇಖರ ಜೈನ್ ಮತ್ತು ಅಶೋಕ್ ರೈ ದೇರ್ಲ ಅವರ ನಾಮಪತ್ರವನ್ನು ಚುನಾವಣಾ ಅಧಿಕಾರಿಯಾಗಿರುವ ಎಆರ್‌ಒ ರಘು ಅವರು ತಿರಸ್ಕೃತಗೊಳಿಸಿದ್ದರು. ಸಕಾರಣವಿಲ್ಲದೆ ಮತ್ತು ಉದ್ದೇಶಪೂರ್ವಕವಾಗಿ ತಿರಸ್ಕಾರ ಮಾಡಿದ್ದಾರೆ ಎಂದು ಅಭ್ಯರ್ಥಿಗಳು ನೀಡಿದ್ದ ಮಾಹಿತಿಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಅವರು ಶಾಸಕರ ಗಮನಕ್ಕೆ ತಂದಿದ್ದರು.

ನಾಮಪತ್ರ ಪರಿಶೀಲನೆ ಮಾಡುವ ವೇಳೆ ಸರಿಯಾಗಿಯೇ ಇತ್ತು. ದುರುದ್ದೇಶದಿಂದ ತಿರಸ್ಕರಿಸಿದ್ದೀರಿ ಎಂದು ಶಾಸಕ ಆಕ್ರೋಶ ವ್ಯಕ್ತಪಡಿಸಿದರು.

ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿ ಯಾವ ವಿಭಾಗದಲ್ಲಿ ಸ್ಪರ್ಧಿಸುತ್ತಾರೆ ಎಂಬುದನ್ನು ನಮೂದಿಸಬೇಕು. ನಮೂದಿಸಿದ ಬಳಿಕ ಉಳಿದ ವಿಭಾಗಗಳನ್ನು ಅಳಿಸಬೇಕು. ಅಳಿಸದ ಕಾರಣ ನಾಮಪತ್ರ ತಿರಸ್ಕಾರ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ರಘು ತಿಳಿಸಿದರು. ಕಾನೂನು ಪ್ರಕಾರ ಅಭ್ಯರ್ಥಿ ಸ್ಪರ್ಧಿಸುವ ವಿಭಾಗಕ್ಕೆ ಗುರುತು ಹಾಕಬೇಕು ಎಂದು ಇದ್ದು, ಉಳಿದ ವಿಭಾಗವನ್ನು ಅಳಿಸಬೇಕೆಂಬ ನಿಯಮಇಲ್ಲ. ಆದರೆ, ಅಧಿಕಾರಿ ತಪ್ಪು ಮಾಡಿರುವುದು ಸಾಬೀತಾಗಿದೆ ಎಂದು ಶಾಸಕ ಹೇಳಿದರು.

ಎಷ್ಟು ಲಂಚ ಪಡೆದಿದ್ದೀರಿ?:

ನಾಮಪತ್ರ ತಿರಸ್ಕಾರ ಮಾಡಲು ಎಷ್ಟು ಲಂಚ ತಗೊಂಡಿದ್ದೀರಿ ಎಂದು ಚುನಾವಣಾಧಿಕಾರಿ ರಘು ಅವರನ್ನು ಪ್ರಶ್ನಿಸಿದ ಅಶೋಕ್‌ಕುಮಾರ್ ರೈ, ‘ಪುತ್ತೂರಿನಲ್ಲಿ ಯಾರಿಗೂ ಅನ್ಯಾಯ ಆಗಲು ಬಿಡುವುದಿಲ್ಲ. ಪಡೆದು ಮೋಸ ಮಾಡಲು ಬಿಡುವುದಿಲ್ಲ. ನಿಮ್ಮ ಮೇಲೆ ಮೊದಲೇ ನನಗೆ ದೂರು ಬಂದಿತ್ತು. ಬೇಕಾದ ಹಾಗೆ ಕಾನೂನು ಬದಲಾವಣೆ ಮಾಡುವ ಅಧಿಕಾರ ನಿಮಗಿಲ್ಲ. ಲಂಚ ಪಡೆದು ಅನ್ಯಾಯ ಮಾಡಿರುವ ನಿಮ್ಮನ್ನು ಅಮಾನತು ಮಾಡಿಸುತ್ತೇನೆ’ ಎಂದರು.

ನಮ್ಮಿಬ್ಬರ ನಾಮಪತ್ರ ಸರಿಯಾಗಿಯೇ ಇದೆ, ಕಾರಣವಿಲ್ಲದೆ ತಿರಸ್ಕಾರ ಮಾಡಿದ್ದರಿಂದ ಶಾಸಕರಿಗೆ ದೂರು ನೀಡಿದ್ದೇವೆ ಎಂದು ರಾಜಶೇಖರ್ ಜೈನ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!