ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆಗೆ ಎಲ್ಲೆಡೆ ಕನಿಕರ ವ್ಯಕ್ತವಾಗುತ್ತಿದೆ. ಹಸುವಿನ ಮಾಲೀಕ ಕರ್ಣ ಅವರಿಗೆ ನೆರವಿನ ಮಹಾಪೂರವೂ ಹರಿದು ಬರುತ್ತಿದೆ.

ಬಿಜೆಪಿ ನಾಯಕರು ಸಂಕ್ರಾತಿಯಂದು ಹಸುವಿನ ಕೆಚ್ಚಲು ಕೊಯ್ದ ಸ್ಥಳದಲ್ಲೇ ಗೋಪೂಜೆ ನೆರವೇರಿಸಿದ್ದರು

ಹಸುಗಳ ಮಾಲೀಕ ಕರ್ಣನಿಗೆ ಸಂಸದ ಪಿ.ಸಿ. ಮೋಹನ್‌ ಅವರು ಎರಡು ಹಸುಗಳನ್ನು ಕೊಡುಗೆಯಾಗಿ ನೀಡಿದ್ದರು. ಜೊತೆಗೆ ವಿಪಕ್ಷ ನಾಯಕ ಆರ್‌.ಅಶೋಕ್‌ ಅವರು ಹಸುಗಳ ಚಿಕಿತ್ಸೆಗಾಗಿ 1ಲಕ್ಷ ರೂ. ನೆರವು ಕೊಟ್ಟು ಬಂದಿದ್ದರು.

ಬಿಜೆಪಿ ನಾಯಕರ ಗೋ ಕಾಣಿಕೆಯ ಬೆನ್ನಲ್ಲೇ ಬುಧವಾರ ಸಚಿವ ಜಮೀರ್‌ ಅಹಮದ್‌ ಖಾನ್‌ ಕಳುಹಿಸಿಕೊಟ್ಟಿದ್ದ ಮೂರು ಎಚ್‌ಎಫ್‌ ಹಸುಗಳನ್ನು ಕರ್ಣ ವಾಪಸ್‌ ಕಳುಹಿಸಿದ್ದರು. ಕರ್ಣನ ವರ್ತನೆಯಿಂದ ಬೇಸರಗೊಂಡ ಆತನ ತಾಯಿ ಸವರಿ ಅಮ್ಮಳ್, ಸಹೋದರಿ ಅಮುದಾ ಅವರು ಅಣ್ಣನ ಪರವಾಗಿ ಕ್ಷಮೆ ಕೇಳಲು ಸಚಿವ ಜಮೀರ್‌ ನಿವಾಸಕ್ಕೆ ತೆರಳಿದ್ದರು. ಆಗ ಸಚಿವ ಜಮೀರ್‌ ಅವರು ಮೂರೂ ಹಸುಗಳನ್ನು ಅವರಿಗೇ ನೀಡಿ ಕಳುಹಿಸಿದರು. ಹಸುಗಳನ್ನು ಪಡೆಯಲು ಅಣ್ಣ ನಿರಾಕರಿಸಿದರೆ, ತಂಗಿ ಅವುಗಳನ್ನು ಪಡೆದು ಮನೆಗೆ ಕರೆತಂದಿದ್ದಾರೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಕರ್ಣನ ಸೋದರಿ ಅಮುದಾ, ಜಮೀರಣ್ಣ ಅವರು ಒಳ್ಳೆಯ ಮನಸ್ಸಿನಿಂದ ಹಸುಗಳನ್ನು ಕೊಡಿಸಿದ್ದಾರೆ. ಕೆಲವರು ಈ ವಿಷಯದಲ್ಲಿ ಬೇಕೆಂತಲೇ ರಾಜಕಾರಣ ಮಾಡುತ್ತಿದ್ದು, ನಾವು ಶಾಸಕರ ಜೊತೆಗಿದ್ದೇವೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರು ಹಾಗೂ ಅಣ್ಣ ಕರ್ಣನಿಗೆ ತಿರುಗೇಟು ನೀಡಿದ್ದಾರೆ.

ಏನಿದು ಘಟನೆ?

ಕಳೆದ ಶನಿವಾರ ರಾತ್ರಿ ಚಾಮರಾಜಪೇಟೆಯ ಪೆನ್ಷನ್‌ ಮೊಹಲ್ಲಾದಲ್ಲಿ ರಸ್ತೆಯಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲು ದುಷ್ಕರ್ಮಿಗಳು ಕತ್ತರಿಸಿದ್ದರು. ಈ ಪ್ರಕರಣವನ್ನು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ರಾಜಕೀಯವಾಗಿ ಬಳಸಿಕೊಂಡಿದ್ದವು. ಕಾಂಗ್ರೆಸ್‌ ಸರ್ಕಾರದಲ್ಲಿ ಜಿಹಾದಿ ಮನಸ್ಥಿತಿಗಳು ವಿಜೃಂಬಿಸುತ್ತಿವೆ ಎಂದು ವಿಪಕ್ಷಗಳ ನಾಯಕರು ಟೀಕಿಸಿದ್ದರು. ಘಟನೆ ಸಂಬಂಧ ಕಾಟನ್‌ಪೇಟೆ ಪೊಲೀಸರು 24ಗಂಟೆಗಳಲ್ಲೇ ಬಿಹಾರ ಮೂಲಕ ಆರೋಪಿ ಸೈಯದ್‌ ನಸ್ಸು ಎಂಬಾತನನ್ನು ಬಂಧಿಸಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!