ಪುತ್ತೂರು: ಜಗತ್ತಿನಲ್ಲಿರುವ ಯಾವ ಧರ್ಮವೂ ಹಿಂಸೆಯನ್ನು ಕಲಿಸುವುದಿಲ್ಲ, ಶಾಂತಿಯನ್ನೇ ಕಲಿಸುತ್ತದೆ. ಭಾರತದಲ್ಲಿ ಸರ್ವದರ್ಮಿಯರೂ ಒಟ್ಟಾಗಿ ಸಹಬಾಳ್ಯ ನಡೆಸುತ್ತಿದ್ದಾರೆ ಇದಕ್ಕೆ ಹುಳಿ ಹಿಂಡಲು ರಾಜಕೀಯ ವ್ಯಕ್ತಿಗಳು ತುದಿಗಾಲಲಿ ದ್ದಾರೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರು ಧರ್ಮಕ್ಕಾಗಿ ಏನೂ ಮಾಡಿಲ್ಲ, ಧರ್ಮದ ಹೆಸರಿನಲ್ಲಿ ಪ್ರಚೋಧನಕಾರಿಯಾಗಿ ಭಾಷಣ ಮಾಡುವವರ ಮಕ್ಕಳು ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶದಲ್ಲಿದ್ದಾರೆ ಆದರೆ ಅವರ ಭಾಷಣ ಕೇಳಿದವರ ಮಕ್ಕಳು ಜೈಲಲ್ಲಿದ್ದಾರೆ ಇದು ದುರಂತ ಸಂಗತಿಯಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಕಬಕ ಗ್ರಾಮದ ಮಹಾದೇವಿ ಯುವಕಮಂಡಲದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ವೇದಿಕೆಗೆ ಬಂದು ಧರ್ಮದ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಾರೆ, ಬಳಿಕ ಅಲಿ ದ್ದವರನ್ನು ಪ್ರಚೋಧಿಸಿ ಮನೆಗೆ ತೆರಳುತ್ತಾರೆ. ಗಲಾಟೆಯಾದರೆ ಜೈಲು ಸೇರುವುದು ಬಡವರ ಮಕ್ಕಳು, ಮುಂದೆ ಅವರ ಭವಿಷ್ಯ ಕೋರ್ಟಿನ ಅಲೆದಾಟದಲ್ಲೇ ಮುಗಿಯುತ್ತದೆ. ಇದರ ಬಗ್ಗೆ ಪೋಷಕರು ಜಾಗರೂಕರಾಗಿರಬೇಕು. ನಮ್ಮ ಮಕ್ಕಳು ದಾರಿತಪ್ಪದಂತೆ ನೋಡಿಕೊಳ್ಳಬೇಕು. ಕೋಮು ವಿಚಾರದಲ್ಲಿ ನಿಮ್ಮ ಮಕ್ಕಳ ಮೇಲೆ ಪ್ರಕರಣ ದಾಖಲಾದರೆ ಮತ್ತೆ ಸರಕಾರಿ ಉದ್ಯೋಗಕ್ಕೂ ಕಷ್ಟವಾಗುತ್ತದೆ ಎಂದು ಹೇಳಿದರು. ಕಳೆದ ಕೆಲವು ವರ್ಷಗಳಿಂದ ಇಂಥಹ ಘಟನೆಗಳಿಂದ ಪ್ರಕರಣ ದಾಖಲಿಸಿಕೊಂಡ ಹಲವಾರು ಮಂದಿ ಯುವಕರು ನನ್ನ ಕಚೇರಿಗೆ ಬರುತ್ತಾರೆ. ನಮಗೆ ಈಗ ಸಹಾಯ ಮಾಡುವವರು ಯಾರೂ ಇಲ್ಲ, ಕೋರ್ಟಿಗೆ ಅಲೆದಾಡಿ ಸಾಕಾಗಿ ಹೋಯಿತು ದಯವಿಟ್ಟು ನಮ್ಮನ್ನು ಕಾಪಾಡಿ ಎಂದು ಮನವಿ ಮಾಡುತ್ತಿದ್ದಾರೆ ಎಂದ ಶಾಸಕರು ಧರ್ಮದ ಬಗ್ಗೆ ಉದ್ದುದ್ದ ಭಾಷಣ ಮಾಡುವವರ ಮಕ್ಕಳು ಧರ್ಮ ರಕ್ಷಣೆಗೆ ರಸ್ತೆಗೆ ಇಳಿಯುವುದೇ ಇಲ್ಲ. ಅವರ ಮಕ್ಕಳು ಎಲ್ಲಿದ್ದಾರೆ ಎಂಬುದನ್ನು ನೀವು ಒಮ್ಮೆ ವಿಮರ್ಶೆ ಮಾಡಿಕೊಳ್ಳಿ ಸತ್ಯ ಬಹಿರಂಗವಾಗುತ್ತದೆ ಎಂದು ಶಾಸಕರು ಹೇಳಿದರು.