ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟ ಆಗುತ್ತಿದ್ದು, 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುತ್ತಿದೆ. ಆಡಳಿತ ವಿರೋಧಿ ಅಲೆಯಲ್ಲಿ ಎಎಪಿ ಕೊಚ್ಚಿ ಹೋಗಿದ್ದು, ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೋಲಿನ ಸುಳಿಯಲ್ಲಿ ಸಿಲುಕಿದ್ದಾರೆ.

70 ಕ್ಷೇತ್ರಗಳ ಪೈಕಿ ಮುಸ್ತಾಫಾಬಾದ್ ವಿಧಾನಸಭಾ ಕ್ಷೇತ್ರ ಸದ್ಯ ಭಾರೀ ಚರ್ಚೆಯಲ್ಲಿದೆ. ಮುಸ್ತಾಫಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೋಹನ್ ಸಿಂಗ್ ಬಿಷ್ಠ 30 ಸಾವಿರ ಮತಗಳ ಮುನ್ನಡೆಯಲ್ಲಿದ್ದು, ಬಹುತೇಕ ಗೆಲುವು ಖಚಿತ ಎನ್ನಲಾಗುತ್ತಿದೆ. ಕರ್ವಾಲ ನಗರ ಕ್ಷೇತ್ರದ ಶಾಸಕರಾಗಿದ್ದ ಮೋಹನ್ ಸಿಂಗ್ ಅವರಿಗೆ ಬಿಜೆಪಿ ಮುಸ್ತಾಫಾಬಾದ್‌ದಿಂದ ಟಿಕೆಟ್ ನೀಡಿತ್ತು.

ದೆಹಲಿಯಲ್ಲಿ ಮುಸ್ಲಿಮರ ಪ್ರಾಬಲ್ಯವುಳ್ಳ ಐದು ಕ್ಷೇತ್ರಗಳಲ್ಲಿ ಮುಸ್ತಾಫಾಬಾದ್‌ ಸಹ ಒಂದಾಗಿದೆ. ಈ ಕ್ಷೇತ್ರದಲ್ಲಿ ಶೇ.40ರಷ್ಟು ಮುಸ್ಲಿಂ ಸಮುದಾಯದ ಮತಗಳಿವೆ. ಶೇ.12ರಷ್ಟು ಠಾಕೂರ್ ಮತ್ತು ಶೇ. 10ರ ಆಸುಪಾಸಿನಲ್ಲಿ ದಲಿತ ಸಮುದಾಯದ ಮತಗಳಿವೆ. ಮುಸ್ಲಿಂ ಪ್ರಾಬಲ್ಯದ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸುವಲ್ಲಿ ಯಶಸ್ವಿಯಾಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ ಎಂಬುವುದು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ಜಗದೀಶ್ ಪ್ರಧಾನ್ ಅವರು ಮುಸ್ತಾಫಾಬಾದ್‌ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಬಿಜೆಪಿ ಕೊನೆ ಕ್ಷಣದಲ್ಲಿ ಅಭ್ಯರ್ಥಿಯ ಬದಲಾವಣೆ ಮಾಡಿ ಮೋಹನ್ ಸಿಂಗ್ ಅವರಿಗೆ ನೀಡಿತ್ತು. ಇತ್ತ ಕರ್ವಾಲ ಕ್ಷೇತ್ರದ ಟಿಕೆಟ್‌ನ್ನು ಹಿಂದೂ ಮುಖಂಡ ಕಪಿಲ್ ಮಿಶ್ರಾ ಅವರಿಗೆ ನೀಡಲಾಯ್ತು. ಸಾಮಾನ್ಯ ಕಾರ್ಯಕರ್ತರಾಗಿ ತಳಮಟ್ಟದಲ್ಲಿ ಕೆಲಸ ಮಾಡುತ್ತಿದ್ದ ಮೋಹನ್ ಸಿಂಗ್ ಅವರ ಗೆಲುವಿಗೆ ಇದು ಸಹಾಯವಾಯ್ತು. ಮತ್ತೊಂದೆಡೆ ಕರ್ವಾಲದಲ್ಲಿಯೂ ಪಕ್ಷ ಸಂಘಟನೆ ಮಾಡಿದ್ದರಿಂದಲೂ ಅಲ್ಲಿಯೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

ದೆಹಲಿ ದಂಗೆಯ ಆರೋಪಿಗೆ ಟಿಕೆಟ್
ಆಮ್ ಆದ್ಮಿ ಪಾರ್ಟಿ ಈ ಕ್ಷೇತ್ರದಿಂದ ಹಸನ್ ಅಹಮದ್ ಪುತ್ರ ಆದಿಲ್ ಅಹಮದ್‌ಗಗೆ ಟಿಕೆಟ್ ನೀಡಿತ್ತು. ಇತ್ತ ಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ (AIMIM Chief Asaduddin Owaisi) ಈ ಕ್ಷೇತ್ರದಿಂದ ತಾಹಿರ್ ಹುಸೈನ್ ಅವರನ್ನ ಕಣಕ್ಕಿಳಿಸಿತ್ತು. ತಾಹಿರ್ ಹುಸೈನ್ ದೆಹಲಿ ದಂಗೆಯ (Delhi Riots) ಆರೋಪಿಯಾಗಿದ್ದು, ಚುನಾವಣೆ ಪ್ರಚಾರಕ್ಕಾಗಿ ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್‌ಗೂ ಮನವಿ ಸಲ್ಲಿಕೆ ಮಾಡಿದ್ದರು.

ಬಿಜೆಪಿಯಿಂದ ಮನೆ ಮನೆ ಪ್ರಚಾರ
ಓವೈಸಿ ಪಾರ್ಟಿಯಿಂದ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಯುತ್ತಿದ್ದಂತೆ ಮತ ವಿಭಜನೆಯ ಆತಂಕ ಎಎಪಿಗೆ ಶುರುವಾಗಿತ್ತು. ಮತ್ತೊಂದೆಡೆ ಕಾಂಗ್ರೆಸ್‌ನಿಂದ ಅಲಿ ಮೆಹದಿ ಸಹ ಕಣದಲ್ಲಿದ್ದರು. ಒಂದೇ ಕ್ಷೇತ್ರದಲ್ಲಿ ಮೂರು ಮುಸ್ಲಿಂ ಪ್ರಬಲ ಅಭ್ಯರ್ಥಿಗಳು ಕಣದಲ್ಲಿದ್ದರಿಂದ ಶೇ.40ರಷ್ಟು ಮತಗಳ ವಿಭಜನೆಯಾಗಿದ್ದು, ಹಿಂದೂ ಮತಗಳ ಕ್ರೋಢಿಕರಣವಾದಂತೆ ಕಂಡು ಬಂದಿದೆ. ಇತ್ತ ಬಿಜೆಪಿ ತಳಮಟ್ಟದಿಂದ ಚುನಾವಣೆ ಪ್ರಚಾರ ನಡೆಸಿತ್ತು. ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ರಣತಂತ್ರಗಳಿಂದ ಮುಸ್ತಾಫಾಬಾದ್ ಕ್ಷೇತ್ರದಲ್ಲಿ ಮೋಹನ್ ಸಿಂಗ್ ಗೆಲುವಿನ ಸಂಭ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

2020ರಲ್ಲಿ ಹಾಜಿ ಯೂನಸ್ ಇಲ್ಲಿಂದ ಸ್ಪರ್ಧಿಸಿ ಜಗದೀಶ್ ಪ್ರಧಾನ್ ಅವರನ್ನು ಸೋಲಿಸಿದ್ದರು. ಹಿಂದೂ ಮತದಾರರನ್ನು ಸೆಳೆಯಲು ವಿಫಲವಾದ ಹಾಜಿ ಯೂನಸ್ ಬದಲಿಗೆ ಎಎಪಿ ಆದಿಲ್‌ಗೆ ಟಿಕೆಟ್ ನೀಡಿತ್ತು.

Leave a Reply

Your email address will not be published. Required fields are marked *

Join WhatsApp Group
error: Content is protected !!