
ಸೋಮವಾರ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕತಾರ್‌ನ ರಾಜ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು, ಶಿಷ್ಟಾಚಾರ ಬದಿಗೊತ್ತಿ ಸ್ವಾಗತಿಸಿದ್ದಾರೆ. ಪ್ರಧಾನಿ ಮೋದಿ ಅವರ ಆಹ್ವಾನದ ಮೇರೆಗೆ ಫೆಬ್ರವರಿ 17 ರಿಂದ 18 ರ ತನಕ ಭಾರತಕ್ಕೆ ಅಧಿಕೃತ ಭೇಟಿ ನೀಡಿರುವ ಅವರನ್ನು ಖುದ್ದು ಪ್ರಧಾನಿ ಮೋದಿ ಅವರೇ ಸ್ವಾಗತಿಸಿದರು.
ಈ ವೇಳೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೂಡ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.
ಪ್ರಧಾನಿ ಮೋದಿಯವರ ಆಹ್ವಾನದ ಮೇರೆಗೆ ವಿಶ್ವದ ಒಂಬತ್ತನೇ ಶ್ರೀಮಂತ ರಾಜನಾದ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರು ಭೇಟಿ ನಡೆಯುತ್ತಿದ್ದು, ಇದು ಅವರ ಎರಡನೇ ಭೇಟಿಯಾಗಿದೆ. ವಿದೇಶಾಂಗ ಸಚಿವಾಲಯದ ಪ್ರಕಾರ, ಅವರು ಈ ಹಿಂದೆ ಮಾರ್ಚ್ 2015 ರಲ್ಲಿ ಭೇಟಿ ನೀಡಿದ್ದರು. ಇನ್ನು ಕತಾರ್ ರಾಜನ ಭೇಟಿಯ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆಯು “ಭಾರತ ಮತ್ತು ಕತಾರ್ ಸ್ನೇಹ, ವಿಶ್ವಾಸ ಮತ್ತು ಪರಸ್ಪರ ಗೌರವದ ಆಧಾರದ ಮೇಲೆ ದೀರ್ಘಕಾಲದ ಸಂಬಂಧವನ್ನು ಹಂಚಿಕೊಂಡಿವೆ. ಇತ್ತೀಚಿನ ವರ್ಷಗಳಲ್ಲಿ, ವ್ಯಾಪಾರ, ಹೂಡಿಕೆ, ಇಂಧನ, ತಂತ್ರಜ್ಞಾನ, ಸಂಸ್ಕೃತಿ ಮತ್ತು ಜನರಿಂದ ಜನರಿಗೆ ವಿನಿಮಯದಂತಹ ಕ್ಷೇತ್ರಗಳಲ್ಲಿ ಸಂಬಂಧಗಳು ಬೆಳೆದಿವೆ” ಎಂದಿದೆ.
ಕತಾರ್ ರಾಜನ ಭಾರತ ಭೇಟಿಯ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಎಕ್ಸ್ ಖಾತೆಯಲ್ಲಿ, ” ನನ್ನ ಸಹೋದರ, ಕತಾರ್ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಅವರಿಗೆ ಭಾರತದಲ್ಲಿ ಫಲಪ್ರದವಾಗಲಿ ಎಂದು ಹಾರೈಸುತ್ತಾ, ನಾಳೆಯ ನಮ್ಮ ಭೇಟಿಯನ್ನು ಎದುರು ನೋಡುತ್ತಿದ್ದೇನೆ” ಎಂದು ಬರೆದಿದ್ದಾರೆ.
ಪ್ರಮುಖ ಸಭೆಗಳಲ್ಲಿ ಭಾಗವಹಿಸಲಿರುವ ಕತಾರ್ ಅಮೀರ್
ಭಾರತಕ್ಕೆ ಅಧಿಕೃತ ಭೇಟಿ ನೀಡಿರುವ ಕತಾರ್ ರಾಜ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರು, ನಾಳೆ (ಮಂಗಳವಾರ) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ. ಇನ್ನು ಅವರ ಗೌರವಾರ್ಥವಾಗಿ ಔತಣಕೂಟವನ್ನು ಸಹ ಆಯೋಜಿಸಲಿದ್ದಾರೆ. ಇದಾದ ನಂತರ ಅವರು ಹೈದರಬಾದ್ ಹೌಸ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿರಿಯ ಸಚಿವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಗಮನಾರ್ಹವಾಗಿ, ಭಾರತ ಮತ್ತು ಕತಾರ್ ಸ್ನೇಹ, ವಿಶ್ವಾಸ ಮತ್ತು ಪರಸ್ಪರ ಗೌರವದ ಆಳವಾದ ಬೇರೂರಿರುವ ಐತಿಹಾಸಿಕ ಸಂಬಂಧಗಳನ್ನು ಹೊಂದಿವೆ. ಇನ್ನು ಪ್ರಸ್ತುತ ಭೇಟಿಯ ಸಂದರ್ಭದಲ್ಲಿ ಅಲ್-ಥಾನಿ ಅವರು, ವ್ಯಾಪಾರ, ಹೂಡಿಕೆ, ಇಂಧನ ಮತ್ತು ಹೊಸ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿನ ಸಹಕಾರವನ್ನು ಹೆಚ್ಚಿಸಲು ಗಮನಹರಿಸಿದ್ದಾರೆ ಎನ್ನಲಾಗಿದೆ.
ನೌಕಾ ಪಡೆಯ ಅಧಿಕಾರಿಗಳಿಗೆ ಮರಣದಂಡನೆ
ಕತಾರ್ನಲ್ಲಿ ಮರಣದಂಡನೆಗೆ ಒಳಗಾಗಿದ್ದ ಭಾರತೀಯ ಮೂಲದ 8 ಮಂದಿ ನೌಕಾ ಪಡೆಯ ಮಾಜಿ ಅಧಿಕಾರಿಗಳಿಗೆ, ನವದೆಹಲಿಯ ರಾಜತಾಂತ್ರಿಕ ಹಸ್ತಕ್ಷೇಪದ ನಂತರ ಮರಣದಂಡನೆಯನ್ನು ವಿಸ್ತೃತ ಜೈಲು ಶಿಕ್ಷೆಗೆ ಬದಲಾಯಿಸಲಾಗಿತ್ತು. ಆದಾದ ನಂತರವು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತನ್ನ ಹಲವಾರು ಪ್ರಯತ್ನಗಳಿಂದ ಆ ಅಧಿಕಾರಿಗಳನ್ನು ಬಿಡುಗಡೆಗೊಳಿಸಿ ಭಾರತಕ್ಕೆ ಕರೆತರುವಲ್ಲಿ ಸಫಲವಾಗಿತ್ತು. ಆದಾಗ್ಯೂ, ಈ ವ್ಯಕ್ತಿಗಳಲ್ಲಿ ಒಬ್ಬರು ಇನ್ನೂ ಭಾರತಕ್ಕೆ ಹಿಂತಿರುಗಿಲ್ಲ. ಇನ್ನು ಇವರ ಬಿಡುಗಡೆಗೆ ಸಹಕರಿಸಿದ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು, ಕತಾರ್ ರಾಜ ಶೇಖ್ ತಮೀಮ್ ಅವರನ್ನು ಕಳೆದ ವರ್ಷ ದ್ವಿಪಕ್ಷೀಯ ಭೇಟಿಗಾಗಿ ದೋಹಾಗೆ ತೆರಳಿದ್ದ ಸಂದರ್ಭದಲ್ಲಿ ಪ್ರಶಂಸಿ, ಭಾರತಕ್ಕೆ ಬರುವಂತೆ ಆಹ್ವಾನ ನೀಡಿದ್ದರು.
