ಮಂಗಳೂರು ಫೆ 18: ಅಸಮರ್ಪಕ ರೀತಿಯಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ವಾಹನ ಸವಾರರಿಂದ ಟೋಲ್ ಸಂಗ್ರಹಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ 75 ರ ಬ್ರಹ್ಮರಕೊಟ್ಲು ಟೋಲ್ ಗೇಟ್ ಕೂಡಲೇ ಸ್ಥಗಿತಗೊಳಿಸಬೇಕು ಮತ್ತು ಕಡಬ ತಾಲೂಕಿನ ಕೊಯಿಲ ಗ್ರಾಮದಲ್ಲಿ 300 ಕೋಟಿ ರೂಪಾಯಿಗಳ ಯೋಜನೆಯೊಂದಿಗೆ ಆರಂಭವಾದ ಪಶು ವೈದ್ಯಕೀಯ ಮತ್ತು ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕಾಮಗಾರಿಯನ್ನು ಮುಂದುವರಿಸಬೇಕೆಂದು  SDPI ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ನೇತೃತ್ವದ ತಂಡವು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ಶ್ರೀ ಮುಲೈ ಮುಹಿಲನ್ ರವರನ್ನು ಭೇಟಿಯಾಗಿ ಒತ್ತಾಯಿಸಿದೆ.

ವಿವಾದಗಳಿಂದ ಕುಖ್ಯಾತಿ ಪಡೆದಿರುವ, ಮೂಲಭೂತ ಸೌಲಭ್ಯಗಳಿಲ್ಲದ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಬ್ರಹ್ಮರಕೊಟ್ಲು ಟೋಲ್ ಗೇಟ್ ನಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಹಣ ಸಂಗ್ರಹ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಗದಿಪಡಿಸಿದ ಮಾನದಂಡಗಳನ್ನು ಉಲ್ಲಂಘಿಸಿ ನಡೆಸುತ್ತಿರುವ ಟೋಲ್ ಗೇಟ್ ಬಗ್ಗೆ ಸಾರ್ವಜನಿಕರು ಬಹಳ ಸಮಯದಿಂದ ಅಸಹನೆ ವ್ಯಕ್ತಪಡಿಸುತ್ತಿದ್ದರೂ ಕಾನೂನಿಗೆ ವಿರುದ್ಧವಾಗಿ ಟೋಲ್ ಸಂಗ್ರಹ ಮಾಡುತ್ತಿದ್ದು, ಇದು ಖಂಡನೀಯ. ಈಗಾಗಲೇ SDPI ಸೇರಿದಂತೆ ಹಲವಾರು ಪಕ್ಷಗಳು, ಸಂಘಟನೆಗಳು ಹೋರಾಟ ಆರಂಭಿಸಿದ್ದು ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ಬ್ರಹ್ಮರಕೊಟ್ಲು ಟೋಲ್ ಸಂಗ್ರಹವನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು SDPI ತಂಡವು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದೆ.

ಅದೇ ರೀತಿ ಕಡಬ ತಾಲೂಕಿನ ಕೊಯಿಲ ಗ್ರಾಮದಲ್ಲಿ ಸುಮಾರು 224 ಎಕರೆ ಸರಕಾರಿ ಜಮೀನಿನಲ್ಲಿ 2015 ರಲ್ಲಿ  ಆರಂಭಿಸಿದ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕಾಮಗಾರಿ  ನೆನೆಗುದಿಗೆ ಬಿದ್ದು ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗುತ್ತಿದೆ. 2012 ರಲ್ಲಿ ಡಿ ವಿ ಸದಾನಂದ ಗೌಡರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರಾಜ್ಯ ಬಜೆಟ್ ನಲ್ಲಿ ಕಡಬ ತಾಲೂಕಿನ ಕೊಯಿಲ ಗ್ರಾಮದ ಸರಕಾರಿ ಫಾರ್ಮ್ ನಲ್ಲಿ ಪಶು ವೈದ್ಯಕೀಯ ಮತ್ತು ಮೀನುಗಾರಿಕಾ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ನಿರ್ಮಾಣವನ್ನು ಘೋಷಣೆ ಮಾಡಿ ಸುಮಾರು 300 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದರು. ಬಳಿಕ 2015 ರಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಯೋಜನೆಗೆ  ಶಂಕುಸ್ಥಾಪನೆ ನೆರವೇರಿಸಿದ್ದರು. ತದನಂತರ ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್  ಮೈಸೂರು ಮೂಲದ ಸ್ಟಾರ್ ಬಿಲ್ಡರ್ ಎಂಬ ಗುತ್ತಿಗೆ ಕಂಪೆನಿಗೆ ಮೊದಲ ಹಂತದ ಕಾಮಗಾರಿ ನಡೆಸಲು ಗುತ್ತಿಗೆ ನೀಡಿತ್ತು.  2019 ರಲ್ಲಿ ಮೊದಲ ಹಂತದ ಕಾಮಗಾರಿ ಮುಗಿದ ಬಳಿಕ ಮುಂದಿನ ಹಂತದ ಕಾಮಗಾರಿ ಕಳೆದ ಐದು ವರ್ಷಗಳಿಂದ  ಅರ್ಧಕ್ಕೆ ನಿಂತಿದೆ. ಯೋಜನೆಯು  ರಾಜ್ಯ ಬಜೆಟ್ ನಲ್ಲಿ ಘೋಷಣೆಯಾಗಿ ಹದಿಮೂರು ವರ್ಷಗಳು ಕಳೆದರೂ ಇನ್ನೂ ಐವತ್ತು ಶೇಕಡಾ ಕಾಮಗಾರಿ ಆಗದೇ ಇರುವುದು ಸರಕಾರ,  ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷದಿಂದ ಆಗಿರುತ್ತದೆ. ಸರಕಾರದ ನೂರಾರು ಕೋಟಿ ಸಾರ್ವಜನಿಕ ತೆರಿಗೆ ಹಣ ಉಪಯೋಗಕ್ಕೆ ಬಾರದೆ ಪೋಲಾಗುತ್ತಿರುವುದನ್ನು SDPI ಗಂಭೀರವಾಗಿ ಪರಿಗಣಿಸಿದ್ದು, ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹೋರಾಟ ನಡೆಸಲು ತೀರ್ಮಾನಿಸಿದೆ. ಆದ್ದರಿಂದ ಜಿಲ್ಲಾಡಳಿತ ವಿಷಯದ ಗಂಭೀರತೆ ಅರಿತು ಪ್ರಸ್ತುತ ಯೋಜನೆಯನ್ನು ಪೂರ್ಣಗೊಳಿಸಲು ಸರಕಾರದ ಸಂಬಂಧಪಟ್ಟ, ಸಚಿವರೊಂದಿಗೆ ಮಾತನಾಡಿ ಯೋಜನೆಯ ಹಣ ಬಿಡುಗಡೆ ಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಯಲ್ಲಿ SDPI ಆಗ್ರಹಿಸಿದೆ.

ಈ ಸಂದರ್ಭದಲ್ಲಿ SDPI ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಮೂನಿಷ್ ಅಲಿ, ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ, ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಮದ್ವ ,  ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಿದ್ದೀಕ್ ಬೆಂಗರೆ ಜತೆಯಲ್ಲಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!