
ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಶಾಸಕರೊಬ್ಬರು ಪಾನ್ ಮಸಾಲ ಜಗಿದು ಉಗಿದಿರುವ ಘಟನೆ ವರದಿಯಾಗಿದೆ
ವಿಧಾನಸಭೆಯ ಸಭಾಂಗಣದಲ್ಲಿ ಶಾಸಕರು ಉಗುಳಿರುವ ಘಟನೆಯನ್ನು ಸ್ಪೀಕರ್ ಸತೀಶ್ ಮಹಾನ ಅವರು ಪ್ರಸ್ತಾಪಿಸಿದ್ದು, ಉಗುಳಿದ ಕಲೆಗಳನ್ನು ತಾವೇ ಸ್ವಚ್ಛಗೊಳಿಸಿರುವುದಾಗಿಯೂ ಹೇಳಿರುವುದು ಸದನದ ಸದಸ್ಯರು ತಲೆ ತಗ್ಗಿಸುವಂತೆ ಮಾಡಿದೆ.
ಇಂದು ಕಲಾಪ ಆರಂಭಕ್ಕೂ ಮುನ್ನವೇ ಮಾತನಾಡಿದ ಸ್ಪೀಕರ್, ಬೆಳಗ್ಗೆ ಸದಸ್ಯರೊಬ್ಬರು ವಿಧಾನಸೌಧದ ಸಭಾಂಗಣದಲ್ಲಿ ಪಾನ್ ಮಸಾಲ ಸೇವಿಸಿದ ನಂತರ ಉಗುಳಿದ್ದಾರೆ ಎಂಬ ಮಾಹಿತಿ ಬಂತು. ಹಾಗಾಗಿ ನಾನಿಲ್ಲಿಗೆ ಬಂದು ಅದನ್ನು ಸ್ವಚ್ಛಗೊಳಿಸಿದೆ ಎಂದು ತಿಳಿಸಿದ್ದಾರೆ.
ಉಗುಳಿದ ಶಾಸಕರು ಯಾರು ಎಂಬುದನ್ನು ವಿಡಿಯೋನಲ್ಲಿ ನೋಡಿದ್ದೇನೆ. ನೇರವಾಗಿ ಹೇಳಿ ಯಾರನ್ನೂ ಅವಮಾನಿಸಲು ಬಯಸುವುದಿಲ್ಲ, ನಾನು ಅವರ ಹೆಸರನ್ನೂ ಪ್ರಸ್ತಾಪಿಸುವುದಿಲ್ಲ. ಇನ್ಮುಂದೆ ಯಾರಾದ್ರೂ ಈ ರೀತಿ ಮಾಡುವುದು ಕಂಡರೆ ಅದನ್ನು ತಡೆಯಬೇಕು ಅಂತ ನಾನು ಎಲ್ಲಾ ಸದರಿಗೆ ಒತ್ತಾಯಿಸುತ್ತೇನೆ. ಸದನವನ್ನು ಸ್ವಚ್ಛವಾಗಿಡುವುದು ನಮ್ಮ ಜವಾಬ್ದಾರಿ. ಶಾಸಕರು ಅವರಾಗಿಯೇ ಈ ತಪ್ಪು ಮಾಡಿದ್ದಾರೆಂದು ಹೇಳಿದರೆ ಒಳ್ಳೆಯದು, ಇಲ್ಲದಿದ್ದರೆ ನಾನೇ ಅವರನ್ನು ಕರೆಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
