
ಮಾ. 23ರಂದು ಬೆಳಗ್ಗೆ ಮಾತನಾಡಿದ್ದ ಬಸವರಾಜ ಹೊರಟ್ಟಿ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ಸೂಚನೆ ನೀಡಿದ್ದರು.
ಹೊರಟ್ಟಿ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದ ಬೆನ್ನಲ್ಲೇ ಸಂಜೆ ವೇಳೆಗೆ ಬಸವರಾಜ ಹೊರಟ್ಟಿ ಅವರು ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ವೈಯಕ್ತಿಕ ಕಾರಣಗಳಿಂದ ನಾನು ನನ್ನ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ರಾಜೀನಾಮೆಯನ್ನು ಮಾರ್ಚ್.31ರ ಒಳಗೆ ಸ್ವೀಕರಿಸಬೇಕು. ಏಪ್ರಿಲ್.1ರಿಂದ ಅನ್ವಯವಾಗುವಂತೆ ಕ್ರಮ ಕೈಗೊಂಡು ನನ್ನನ್ನು ಈ ಹುದ್ದೆಯಿಂದ ಮುಕ್ತಿಗೊಳಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
ಈ ಪತ್ರ ವೈರಲ್ ಆಗಿರುವುದರ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಬಸವರಾಜ ಹೊರಟ್ಟಿ ರಾಜೀನಾಮೆಗೆಂದು ಪತ್ರ ಟೈಪ್ ಮಾಡಿಸಿದ್ದು ನಿಜ, ಆದರೆ ಇದು ನನ್ನ ಸಹಿ ಇರದ ಪತ್ರ. ಇದನ್ನು ನನ್ನ ಪಿಎ ಸೋರಿಕೆ ಮಾಡಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಜೀನಾಮೆ ಕೊಡುವ ಉದ್ದೇಶವಿತ್ತು, ಆದರೆ ಆಪ್ತರು ದುಡುಕಿನ ನಿರ್ಧಾರ ಬೇಡ ಎನ್ನುತ್ತಿದ್ದಾರೆ ಹೀಗಾಗಿ ರಾಜೀನಾಮೆ ನೀಡಿಲ್ಲ ಎಂದಿದ್ದಾರೆ.






