
ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪದೇ-ಪದೇ ಹಿಂದೂ, ಹಿಂದುತ್ವ ಅಂತಾ ಹೇಳುತ್ತಿರುವುದು ಸರಿಯಲ್ಲ. ನಾಮ ಹಾಕಿ, ದೇವಸ್ಥಾನಕ್ಕೆ ಹೋದ ಮಾತ್ರಕ್ಕೆ ಹಿಂದುತ್ವವಾಗುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಮುಖಂಡ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಟಾಂಗ್ ನೀಡಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹಿಂದುತ್ವವಾದಿ ಎಂದು ಏನು ಬೇಕಾದರೂ ಮಾತನಾಡುವುದಲ್ಲ. ಮಾತನಾಡುವಾಗ ಪ್ರಜ್ಞೆ ಇರಬೇಕು. ಮಾತಿನ ಮೇಲೆ ನಿಗಾವಹಿಸಬೇಕು ಎಂದರು.
ಒಂದು ಸಂಘಟನೆಯಲ್ಲಿದ್ದಾಗ ಮಾತು ಗಡಿ ಮೀರಿ ಹೋಗಬಾರದು. ಪಕ್ಷದ ಸಮಿತಿ ಒಳಗೆ ಮಾತನಾಡಬೇಕು. ಬೀದಿಯಲ್ಲಿ ಮಾತನಾಡುವುದು ಹಿಂದುತ್ವದ ಲಕ್ಷಣ ಅಲ್ಲ. ಹಿಂದುತ್ವದಲ್ಲಿ ಶಿಸ್ತು ಇದೆ. ಅದು ಇಲ್ಲದಿದ್ದರೆ ಹಿಂದುತ್ವವಾದಿ ಆಗಲು ಸಾಧ್ಯವಿಲ್ಲ. ಪಕ್ಷದಲ್ಲಿ ಶಿಸ್ತಿನಿಂದ ಇರದಿದ್ದರೆ ಇಂತಹ ಸಮಸ್ಯೆ ಆಗುತ್ತವೆ ಎಂದು ಯತ್ನಾಳ್ ಉಚ್ಚಾಟನೆ ವಿಚಾರವನ್ನು ಸಮರ್ಥಿಸಿಕೊಂಡು ಮಾತಿನಲ್ಲೇ ತಿವಿದರು.






