

ಮಂಗಳೂರು :ಸಂಸತ್‌ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ವಿರೋಧಿಸಿ, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಜಿಲ್ಲಾ ಘಟಕದ ನೇತೃತ್ವದಲ್ಲಿ ಬುಧವಾರ ಇಲ್ಲಿ ಪ್ರತಿಭಟನೆ ನಡೆಯಿತು.
ವಕ್ಫ್ ಆಸ್ತಿ ಬಿಟ್ಟು ಕೊಡುವುದಿಲ್ಲ, ಸಂವಿಧಾನ ವಿರೋಧಿ ಕಾನೂನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಘೋಷಣೆ ಕೂಗಿದ ಪ್ರತಿಭಟನಕಾರರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು.ವಕ್ಫ್ ಮಸೂದೆ ಪ್ರತಿಯನ್ನು ಹರಿದು ಹಾಕಿ, ವಿರೋಧ ವ್ಯಕ್ತಪಡಿಸಿದರು.
ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಮಾತನಾಡಿ, ‘ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಐದು ತಿಂಗಳುಗಳಲ್ಲಿ ನಾಲ್ಕು ಪ್ರತಿಭಟನೆ ನಡೆಸಲಾಗಿದೆ. ಎಸ್‌ಡಿಪಿಐ, ಜಾತ್ಯತೀತ ಸಂಘಟನೆಗಳಿಗೆ ಆಕ್ಷೇಪ ವ್ಯಕ್ತಪಡಿಸಲು ಅವಕಾಶ ನೀಡದೆ, ಎನ್‌ಡಿಎ ಸರ್ಕಾರ ಕೇವಲ ಸಂಘ ಪರಿವಾರದ ಅಭಿಪ್ರಾಯ ಸಂಗ್ರಹಿಸಿದೆ. ಸಂವಿಧಾನದ ವಿಚಾರಧಾರೆ ಒಪ್ಪುವವರೆಲ್ಲರೂ ಈ ಮಸೂದೆಯನ್ನು ವಿರೋಧಿಸಿದ್ದಾರೆ’ ಎಂದರು.
ಮುಸ್ಲಿಮರ ಅಸ್ತಿತ್ವದ ಪ್ರತೀಕವಾಗಿರುವ ವಕ್ಫ್ ಆಸ್ತಿಯನ್ನು ಸರ್ಕಾರೀಕರಣ ಗೊಳಿಸಲು ಮಾರಕ ಕಾನೂನು ತರಲು ಕೇಂದ್ರ ಸರ್ಕಾರ ಮುಂದಾಗಿದೆ. ದೇಶದಲ್ಲಿ ಜೀವಂತವಾಗಿರುವ ಸಮಸ್ಯೆಗಳನ್ನು ನಿರ್ಲಕ್ಷಿಸಿ, ಮತ ಧ್ರುವೀಕರಣಕ್ಕಾಗಿ ಈ ಕಾರ್ಯ ಮಾಡಲು ಹೊರಟಿದೆ. ಈ ದೇಶದ ಮುಸ್ಲಿಮರು, ಈ ಮಸೂದೆಯನ್ನು ಒಪ್ಪಲು ಸಾಧ್ಯವಿಲ್ಲ. ಮಸೀದಿ, ಮದರಸ, ಖಬರಸ್ತಾನ, ದೋಚಲು ಬಿಡುವುದಿಲ್ಲ. ಕೇಂದ್ರ ಸರ್ಕಾರ ಈ ಮಸೂದೆ ಹಿಂಪಡೆಯುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು.ಎಸ್‌ಡಿಪಿಐ ಪ್ರಮುಖರಾದ ಜಮಾಲ್ ಜೋಕಟ್ಟೆ, ಅಬ್ದುಲ್ ಜಲೀಲ್ ಕೃಷ್ಣಾಪುರ, ರಿಯಾಜ್ ಕಡಂಬು, ಅತ್ತಾವುಲ್ಲಾ ಜೋಕಟ್ಟೆ, ಮಿಸ್ರಿಯಾ ಕಣ್ಣೂರು, ನೌರಿನ್ ಆಲಂಪಾಡಿ ಮತ್ತಿತರರು ಇದ್ದರು.
