



ಹೈಕಮಾಂಡ್ ನಾಯಕರು ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಟ್ಟು ಕೊಡುವುದಿಲ್ಲ ಎಂಬ ಭರವಸೆ ಇದ್ದು, ಯತ್ನಾಳ್ ಅವರ ಬಾಯಿ ಮುಚ್ಚಿಸಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ. ಆ ಮೂಲಕ ಪಕ್ಷಕ್ಕೆ ಒಳ್ಳೆಯದಾಗುತ್ತೆ ಎಂದು ರೆಬಲ್ ಬಣದ ಶಾಸಕ ರಮೇಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಯತ್ನಾಳ್ ಅವರು ಈಗಲೂ ನಮ್ಮ ತಂಡದಲ್ಲಿದ್ದಾರೆ. ಯತ್ನಾಳ್ ಮಾತಿನ ಭರದಲ್ಲಿ ಏನೇನು ಮಾತನಾಡುತ್ತಾರೆ. ತಪ್ಪು ಅಂತಾ ಅನಿಸಿದಾಗ ನೇರವಾಗಿ ಮಾತನಾಡುವ ಸ್ವಭಾವ ಅವರದ್ದು ಹೊರತು ಯಾರಿಗೂ ಕೆಟ್ಟದ್ದನ್ನು ಬಯಸುವ ಗುಣ ಅವರಿಗೆ ಇಲ್ಲ. ಈ ಕುರಿತು ರಾಜ್ಯದ ಜನರಿಗೆ ಗೊತ್ತಿದೆ ಎಂದು ರಮೇಶ್ ಜಾರಕಿಹೊಳಿ ಬ್ಯಾಟಿಂಗ್ ಮಾಡಿದರು.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲಿಗೂ ಹೋದ್ರೂ ನಮ್ಮ ಬಿಜೆಪಿ ಪಕ್ಷದಲ್ಲೇ ನಮಗೆ ನ್ಯಾಯ ಸಿಗಲಿದೆ. ಯತ್ನಾಳ್ ಹೊಸ ಪಕ್ಷ ಕಟ್ಟಲ್ಲ. ವರಿಷ್ಠರಿಗೆ ನಾವು ಮತ್ತೊಮ್ಮೆ ಮನವಿ ಮಾಡಿ ಅವರನ್ನು ಪುನಃ ಪಕ್ಷಕ್ಕೆ ಕರೆಯುವಂತೆ ಮನವರಿಕೆ ಮಾಡುತ್ತೇವೆ ಎಂದು ಹೇಳಿದರು.
ಅಲ್ಲದೇ, ಇನ್ಮುಂದೆ ಯಾರನ್ನೂ ಬೈಯೋದು ಬೇಡ. ಪಕ್ಷಕ್ಕೆ ಡ್ಯಾಮೇಜ್ ಆಗದಂತೆ ಮಾತನಾಡದಂತೆ ನಾವು ಯತ್ನಾಳ್ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇವೆ. ಅವರು ನಮ್ಮ ಮಾತಿಗೆ ಸ್ಪಂದಿಸುತ್ತಾರೆ ಎಂದು ರಮೇಶ್ ಅವರು ಇದೇ ವೇಳೆ ತಿಳಿಸಿದರು.
