



ಪುತ್ತೂರು; ಗ್ಯಾರಂಟಿ ನೆಪದಲ್ಲಿ ಅಭಿವೃದ್ಧಿಯನ್ನು ಮರೆತು ತುಘಲಕ್ ನೀತಿಯಲ್ಲಿ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರ ಜನತೆಗೆ ಬಂಗಾರದ ಬೀಸತ್ತಿ ತೋರಿಸಿ, ಕಬ್ಬಿಣದ ಚೂರಿಯಿಂದ ಚುಚ್ಚುತ್ತಿದೆ. ಒಂದು ವರ್ಗದ ಜನರನ್ನು ಏಲೈಕೆ ಮಾಡುತ್ತಾ ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ಜೀವನವನ್ನು ನರಕದರ್ಶಕವನ್ನಾಗಿ ಮಾಡುತ್ತಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದರು.
ಎ.೯ರಂದು ಮಂಗಳೂರಿನಲ್ಲಿ ನಡೆಯಲಿರುವ ಜನಾಕ್ರೋಶ ಯಾತ್ರೆಯ ಹಿನ್ನಲೆಯಲ್ಲಿ ಸೋಮವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅವರು ೨ನೇ ಬಾರಿಗೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರ ಮೇಲೆ ಜನತೆ ಭರವಸೆ ಇಟ್ಟಿದ್ದರು. ಆದರೆ ಇದೀಗ ಭರವಸೆ ಹುಸಿಯಾಗಿದೆ. ಹಾಲಿನಿಂದ ವಿದ್ಯುತ್ ತನಕ ಬೆಲೆ ಏರಿಕೆಯ ದುಬಾರಿ ಬದುಕನ್ನು ಜನತೆಗೆ ನೀಡಿದೆ ಎಂದರು.
ವಿಧಾನಸಭೆ ಮತ್ತು ವಿಧಾನಪರಿಷತ್‌ಗಳಲ್ಲಿ ಹಲವಾರು ಬಾರಿ ಅನುಚಿತ ಘಟನೆಗಳಾಗಿವೆ. ಆದರೆ ಎಲ್ಲಿಯೂ ಶಾಸಕರನ್ನು ಅಮಾನತುಗೊಳಿಸಿರುವ ಪ್ರಕರಣಗಳಿಲ್ಲ. ಆದರೆ ಈ ರಾಜ್ಯ ಸರ್ಕಾರ ಬಿಜೆಪಿ ಶಾಸಕರನ್ನು ೬ ತಿಂಗಳ ಕಾಲ ಅಮಾನತು ಮಾಡುವ ಮೂಲಕ ಧ್ವೇಷ ರಾಜಕಾರಣ ನಡೆಸುತ್ತಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಆರೋಪ, ಮಾನಸಿಕ ಹಿಂಸೆ ನೀಡುವ ಮುಖಾಂತರ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಯನ್ನು ರಾಜ್ಯ ಸರ್ಕಾರ ನಿರ್ಮಾಣ ಮಾಡುತ್ತಿದೆ ಎಂದು ಅವರು ಹೇಳಿದರು.
ಸುಳ್ಳು ಪುತ್ತೂರಿನಿಂದಲೇ ಆರಂಭ
ರಾಜ್ಯ ಸರ್ಕಾರ ಕೇವಲ ಸುಳ್ಳುಗಳಿಂದಲೇ ದಿನದೂಡುತ್ತಿದೆ. ಹಾಲಿಗೆ ಮೂರು ಸಲ ಬೆಲೆ ಹೆಚ್ಚಿಸಿದೆ. ಆದರೆ ಕಳೆದ ೬ ತಿಂಗಳಿನಿAದ ಈ ತನಕ ರೈತನಿಗೆ ಈ ಹೆಚ್ಚುವರಿ ಹಣ ಸಿಕ್ಕಿಲ್ಲ. ಸರ್ಕಾರದ ಲೆಕ್ಕದಲ್ಲಿ ಈಗ ಲೀಹಾಲಿಗೆ ರೂ.೪೯ ಸಿಗಬೇಕು. ಆದರೆ ಕೇವಲ ೩೯ ಮಾತ್ರ ಸಿಗುತ್ತಿದೆ. ಹೀಗೆಯೇ ಹಲವು ಸುಳ್ಳುಗಳನ್ನು ಹೇಳುತ್ತಾ ಅದನ್ನು ಸತ್ಯ ಎಂಬ ಭ್ರಮೆ ಸೃಷ್ಟಿ ಮಾಡುತ್ತಿದೆ. ಈ ಸುಳ್ಳುಗಳು ಪುತ್ತೂರಿನಿಂದಲೇ ಆರಂಭಗೊಳ್ಳುತ್ತಿದೆ ಎಂದು ಶಾಸಕರ ಹೆಸರೆತ್ತದೆ ಮಾಜಿ ಶಾಸಕರು ಟಾಂಗ್ ಕೊಟ್ಟರು.
ಕಸವನ್ನೂ ಬಿಟ್ಟಿಲ್ಲ..!
ರಾಜ್ಯದಲ್ಲಿ ಪ್ರತಿಯೊಂದಕ್ಕೂ ತೆರಿಗೆ ಹೆಚ್ಚಿಸಲಾಗುತ್ತಿದೆ. ಸ್ಟಾö್ಯಂಪ್‌ಡ್ಯೂಟಿಯ ದರವನ್ನು ಶೇ.೫೦ ಹೆಚ್ಚಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಶುಲ್ಕವನ್ನು ೧೦ರಿಂದ ೨೦ಕ್ಕೇರಿಸಲಾಗಿದೆ. ಮೆಡಿಕಲ್ ಸರ್ಟಿಫಿಕೇಟ್ ದರವನ್ನು ೨೫೦ರಿಂದ ೩೦೦ಕ್ಕೇರಿಸಲಾಗಿದೆ. ರಕ್ತ ಪರೀಕ್ಷೆಯನ್ನು ೭೦ರಿಂದ ೧೨೦ಕ್ಕೆ ಏರಿಕೆ ಮಾಡಲಾಗಿದೆ. ಆರೋಗ್ಯಸೇವೆಯಲ್ಲಿ ಬಡವರ ರಕ್ತ ಹೀರುವ ಕೆಲಸ ಮಾಡುತ್ತಿದೆ. ಅಬಕಾರಿ ಶುಲ್ಕ ಶೇ೨೦ರಿಂದ ೪೦ಕ್ಕೆ ಏರಿಸಲಾಗಿದೆ. ಕೊನೆಗೆ ಕಸವನ್ನೂ ಈ ಸರ್ಕಾರ ಬಿಟ್ಟಿಲ್ಲ. ೧೦ ಬದಲಿಗೆ ೫೦ ಮಾಡಲಾಗಿದೆ ಎಂದು ಸಂಜೀವ ಮಠಂದೂರು ಹೇಳಿದರು.
ಜನಾಕ್ರೋಶ ಯಾತ್ರೆ ಮಂಗಳೂರಿನಲ್ಲಿ ಎ.೯ರಂದು ನಡೆಯಲಿದ್ದು, ಮಧ್ಯಾಹ್ನದ ಬಳಿಕ ಈ ರ‍್ಯಾಲಿ ನಡೆಯಲಿದೆ. ಪುತ್ತೂರಿನಿಂದ ೩ ಸಾವಿರ ಮಂದಿ ಇದರಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪದಾಧಿಕಾರಿಗಳಾದ ಪುರುಷೋತ್ತಮ ಮುಂಗ್ಲಿಮನೆ, ವಿರೂಪಾಕ್ಷ ಮಚ್ಚಿಮಲೆ ಉಪಸ್ಥಿತರಿದ್ದರು.
