



ಬೈಕ್ ಮತ್ತು ಟಿಪ್ಪರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ – ಉಪ್ಪಿನಂಗಡಿ ರಸ್ತೆಯ ಪಣೆಜಾಲಿನ ರತ್ನಗಿರಿ ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ನಿವಾಸಿ ಉಪೇಂದ್ರ (29) ಎಂದು ಗುರುತಿಸಲಾಗಿದೆ.
ಸಹಸವಾರ ಪುತ್ತೂರು ತಾಲೂಕಿನ ಕಾಣಿಯೂರು ಮೋಹನ್(29) ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರಿಬ್ಬರು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ರಜೆ ಇದ್ದ ಕಾರಣ ಮೋಹನ್ ರನ್ನು ಉಪ್ಪಿನಂಗಡಿಗೆ ಬಿಟ್ಟು ಬರಲು ಉಪೇಂದ್ರ ಬೈಕಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಅಪಘಾತ ರಭಸಕ್ಕೆ ಉಪೇಂದ್ರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಬೆಳ್ತಂಗಡಿ ಸಂಚಾರ ಸಬ್ ಇನ್ ಸ್ಪೆಕ್ಟರ್ ಮತ್ತು ತಂಡ ಘಟನಾ ಸ್ಥಳಕ್ಕೆ ಹಾಗೂ ಬೆಳ್ತಂಗಡಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
