ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣಂನ ಪಿಎಂ ಪಾಲೆಮ್‌ನ ಉಡಾ ಕಾಲೋನಿಯಲ್ಲಿ ಇಂದು ಬೆಳಿಗ್ಗೆ ಒಬ್ಬ ವ್ಯಕ್ತಿ 8 ತಿಂಗಳ ಗರ್ಭಿಣಿಯಾಗಿದ್ದ ತನ್ನ 27 ವರ್ಷದ ಪತ್ನಿಯನ್ನು ಕೊಂದಿದ್ದಾನೆ. ಅನುಷಾ ಮತ್ತು ಆಕೆಯ ಪತಿ ಜ್ಞಾನೇಶ್ವರ್ ಇಂದು ಬೆಳಿಗ್ಗೆ ಸಣ್ಣ ವಿಷಯಕ್ಕೆ ಸಂಬಂಧಿಸಿದಂತೆ ಜಗಳವಾಡಿದ್ದರು.

ಇದೇ ಭಾನುವಾರ ವೈದ್ಯರು ಅನುಷಾಳಿಗೆ ಹೆರಿಗೆಗೆ ಆಸ್ಪತ್ರೆಗೆ ಬರಲು ಸೂಚಿಸಿದ್ದರು. ಆದರೆ, ಜ್ಞಾನೇಶ್ವರ್ ಸೋಮವಾರ ಅಡ್ಮಿಟ್ ಆಗೋಣ ಎಂದು ಹಠ ಹಿಡಿದಿದ್ದ. ಇದೇ ವಿಚಾರಕ್ಕೆ ಜಗಳ ಹೆಚ್ಚಾಗಿ ಆತ ಆಕೆ ಕತ್ತು ಹಿಸುಕಿದ್ದಾನೆ. ಇದರಿಂದಾಗಿ ಆಕೆ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ.

ಅನುಷಾ ಮತ್ತು ಜ್ಞಾನೇಶ್ವರ್ ಮನೆಯವರ ಒಪ್ಪಿಗೆಯಿಲ್ಲದೆ ಪ್ರೇಮ ವಿವಾಹ ಮಾಡಿಕೊಂಡಿದ್ದರು. ಜ್ಞಾನೇಶ್ವರ್ ಮತ್ತು ಅನುಷಾ 3 ವರ್ಷಗಳ ಹಿಂದೆ ಪ್ರೀತಿಯಲ್ಲಿ ಬಿದ್ದ ನಂತರ ವಿವಾಹವಾದರು. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ದಂಪತಿಯ ನಡುವೆ ಆಗಾಗ ಜಗಳವಾಗುತ್ತಿತ್ತು.

ನನಗೆ ಕ್ಯಾನ್ಸರ್ ಇದೆ, ನಾನು 1 ವರ್ಷದಲ್ಲಿ ಸಾಯುತ್ತೇನೆ. ನೀನು ನಿನ್ನ ಜೀವನ ಹಾಳು ಮಾಡಿಕೊಳ್ಳಬೇಡ. ಅಪ್ಪ-ಅಮ್ಮನ ಜೊತೆ ಹೋಗು ಎಂದು ಕೂಡ ಜ್ಞಾನೇಶ್ವರ್ ನಾಟಕವಾಡಿದ್ದ. ಆದರೆ, ಅನುಷಾ ನಿನ್ನೊಂದಿಗೆ ಇರುತ್ತೇನೆ ಎಂದು ಹೇಳಿದ್ದಳು. ಅದಾದ 6 ತಿಂಗಳ ನಂತರ, ಅವನು ಮತ್ತೊಂದು ನಾಟಕವನ್ನು ಪ್ರಾರಂಭಿಸಿದ್ದ. ನನ್ನ ಹೆತ್ತವರಿಗೆ ನಮ್ಮ ಮದುವೆ ಇಷ್ಟವಿಲ್ಲ, ಅವರು ನಿನ್ನನ್ನು ಮತ್ತು ನನ್ನನ್ನು ಬದುಕಲು ಬಿಡುವುದಿಲ್ಲ. ಹೀಗಾಗಿ ವಿಚ್ಛೇದನ ಪಡೆದುಕೊಳ್ಳೋಣ ಎಂದು ಕೇಳಿದ್ದ. ಆದರೆ ಅನುಷಾ ಅದಕ್ಕೆ ಒಪ್ಪಲಿಲ್ಲ.

ಇಂದು ಬೆಳಗ್ಗೆ ಆಕೆ ಆತ ಕತ್ತು ಹಿಸುಕಿದ್ದರಿಂದ ಪ್ರಜ್ಞೆ ತಪ್ಪಿದಾಗ ಆಕೆಯ ಮನೆಯವರಿಗೆ ಫೋನ್ ಮಾಡಿ ಅನುಷಾಳಿಗೆ ಹುಷಾರಿಲ್ಲ ಎಂದು ಹೇಳಿದ್ದ. ತಕ್ಷಣ ಬಂದ ಆಕೆಯ ಪೋಷಕರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು. ಆದರೆ, ಜ್ಞಾನೇಶ್ವರ್ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ಆತನನ್ನು ವಿಚಾರಣೆ ಮಾಡಿದಾಗ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಪೊಲೀಸರು ಬಲಿಪಶುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಆರಂಭಿಸಿದ್ದಾರೆ.





Leave a Reply

Your email address will not be published. Required fields are marked *

Join WhatsApp Group
error: Content is protected !!