ಪುತ್ತೂರು; ಪುತ್ತೂರಿನ ಮಾಯ್ ದೆ ದೇವುಸ್ ಚರ್ಚಿನ ಗೇಟ್‌ನ್ನು ೭ ಗಂಟೆಯ ನಂತರ ಬಂದ್ ಮಾಡುವ ಕ್ರಮವನ್ನು ಚರ್ಚ್ ಪಾಲನಾ ಸಮಿತಿ ನಿರ್ಧಾರದಂತೆ ಕೈಗೊಳ್ಳಲಾಗಿದೆ. ಇದರಲ್ಲಿ ಧರ್ಮಗುರುಗಳ ಯಾವುದೇ ಪಾತ್ರವಿಲ್ಲ. ಚರ್ಚ್ನ ಆವರಣದಲ್ಲಿ ಕುಳಿತ ಕೆಲವರು ಅನಾವಶ್ಯಕ ಅಡಚಣೆಗಳನ್ನು ಮಾಡುತ್ತಿರುವುದು ಗಮನಕ್ಕೆ ಬಂದ ಬಳಿಕ ಈ ಕ್ರಮ ಕೈಗೊಳ್ಳಲಾಯಿತು ಎಂದು ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ತ, ಮಾಜಿ ಉಪಾಧ್ಯಕ್ಷ ಜೋ.ಡಿಸೋಜ ಹಾಗೂ ಕ್ಲೆಮೆಂಟ್ ಪಿಂಟೋ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಕೆಲ ದಿನಗಳ ಹಿಂದೆ ಕ್ರಿಶ್ಚಿಯನ್ ಯೂನಿಯನ್ ಎಂಬ ಹೆಸರಿನ ಸಂಘಟನೆಯವರಿಂದ ಧರ್ಮಗುರುಗಳ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಚಚ್ ನ ಆವರಣ ಪಟ್ಟಾಂಗ ಹೊಡೆಯಲು ಇರುವ ಜಾಗವಲ್ಲ. ಅದೊಂದು ಧಾರ್ಮಿಕ ಮಹತ್ವ ಇರುವ ಸ್ಥಳ. ಇಂತಹ ಸ್ಥಳದಲ್ಲಿ ಕುಳಿತುಕೊಂಡು ತಿನ್ನುವುದು ಕುಡಿಯುವಂತಹ ಕ್ರಿಯೆಗಳನ್ನು ನಡೆಸುವುದು ಕ್ರಿಶ್ಚಿಯನ್ ಸಮುದಾಯಕ್ಕೆ ಮಾಡುವ ಅಪಚಾರವಾಗಿದೆ. ಕೆಲವರಿಂದ ಧರ್ಮಗುರುಗಳು ಹಾಗೂ ಇಲ್ಲಿನ ಆಡಳಿತ ವ್ಯವಸ್ಥೆಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ ಎಂದು ಅವರು ಹೇಳಿದರು.
ಚಚ್ ನ ಆವರಣದಲ್ಲಿರುವ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಂದರ್ಭ ಸಿನಿಮಾ ಶೂಟಿಂಗ್ ಮಾಡಲು ಮುಂದಾದ ಸಿನಿಮಾ ತಂಡವನ್ನು ತಕ್ಷಣ ಖಾಲಿ ಮಾಡುವಂತೆ ಸೂಚಿಸಲಾಗಿತ್ತು. ಒಂದೂವರೆ ತಿಂಗಳ ಹಿಂದೆ ಅನುಮತಿ ಕೇಳಿದ್ದ ಅವರು ಪರೀಕ್ಷೆಯ ದಿನವೇ ಶೂಟಿಂಗ್ ನಡೆಸಲು ಮುಂದಾಗಿರುವುದು ಮೊದಲು ನಮ್ಮ ಗಮನಕ್ಕೆ ಬಂದಿರಲಿಲ್ಲ. ಬಂದ ತಕ್ಷಣ ಕ್ರಮಕೈಗೊಳ್ಳಲಾಗಿದೆ. 
ಪುತ್ತೂರು ಚರ್ಚ್ ನ ಧರ್ಮಗುರುಗಳಾದ ವಂ. ಲಾರೆನ್ಸ್ ಮಸ್ಕರೇನಸ್ ಅವರು ಇಲ್ಲಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಜನಾನುರಾಗಿಯಾಗಿದ್ದಾರೆ. ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡಿದ್ದಾರೆ. ಅಂತಹ ಗುರುಗಳ ಬಗ್ಗೆ ಅವಹೇಳಕಾರಿ ಕೀಳು ಮಾತುಗಳನ್ನು ಬಳಸುತ್ತಿರುವುದು ಆತನ ಕೆಟ್ಟ ಮಾನಸಿಕತೆಗೆ ಧ್ಯೋತಕವಾಗಿದೆ.  ಈತನ ಚರ್ಚ್ ವಿರೋಧಿ ಕೃತ್ಯಗಳು ಹೀಗೆ ಮುಂದುವರಿದಲ್ಲಿ ಚರ್ಚ್ ಪಾಲನಾ ಸಮಿತಿ ಆತನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಗೋಷ್ಟಿಯಲ್ಲಿ ಪಾಲನಾ ಸಮಿತಿ ಕಾರ್ಯದರ್ಶಿ ಯುವಿಲಿನ್ ಡಿಸೋಜ, ಸದಸ್ಯರಾದ ಪಾವ್ಲ್ ಹೆರಾಲ್ಡ್ ಮಸ್ಕರೇನಸ್ ಹಾಗೂ ರೋಶನ್ ಲಸ್ರಾದೋ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!