
ಶಿರಾಡಿ ಗ್ರಾಮದ ಬರ್ಚಿನಹಳ್ಳದಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾರು ಹಾಗೂ ಲಾರಿ ನಡುವೆ ಢಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಅದಿತ್ಯವಾರ ಸಂಭವಿಸಿದೆ.
ತ್ರಿಪುರಾ ಮೂಲದ ಅಬ್ದುಲ್ ಶುಕ್ರು ಚೌಧರಿ (72) ಮೃತಪಟ್ಟವರು.
ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಮಂಗಳೂರಿನಿಂದ ಬೆಂಗಳೂರು ಕಡೆಗೆ ಚಲಿಸುತ್ತಿದ್ದ ಮಿನಿ ಲಾರಿ ನಡುವೆ ಅಪಘಾತ ಸಂಭವಿಸಿದೆ.
ಅಬ್ದುಲ್ ಶುಕ್ರು ಅವರ ಪತ್ನಿ ಲತಿಕಾ, ಮಗಳು ಅನ್ವೇಷ, ಅಳಿಯ ಶಾಂತನು, ಮೊಮ್ಮಗ ಅನ್ಸು ಅವರು ಸಣ್ಣಪುಟ್ಟ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರು ಅವರು ಮಂಗಳೂರಿನಲ್ಲಿ ವಿಮಾ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಮಗಳ ಮಗನನ್ನು ನೋಡಲೆಂದು ಬರುತ್ತಿದ್ದರು.
ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






