ಕಳೆದ ಕೆಲ ದಿನಗಳಿಂದಲೂ ಭಾರತ ಮತ್ತು ಪಾಕಿಸ್ತಾನದ ಷೇರು ಮಾರುಕಟ್ಟೆಗಳು (stock market) ಪರಸ್ಪರ ಭಿನ್ನ ದಾರಿ ಹಿಡಿಯುವುದು ಇವತ್ತೂ ಮುಂದುವರಿದಿದೆ. ನಿನ್ನೆ, ಮೊನ್ನೆಯೆಲ್ಲಾ ಭಾರತದ ಮಾರುಕಟ್ಟೆ ಸಕಾರಾತ್ಮಕವಾಗಿದ್ದರೆ, ಪಾಕಿಸ್ತಾನದ ಷೇರು ಪೇಟೆ ಜರ್ಝರಿತಗೊಂಡಿತ್ತು.

ನಿನ್ನೆ ಕರಾಚಿ-100 ಸೂಚ್ಯಂಕ ಶೇ. 7ರಷ್ಟು ಕುಸಿತವಾಗಿ ಒಂದಷ್ಟು ಹೊತ್ತು ವ್ಯವಹಾರವೇ ನಿಂತುಹೋಗಿತ್ತು. ಇವತ್ತು ವಿಭಿನ್ನ ಸ್ಥಿತಿ ಇದೆ. ಇಂದು ಶುಕ್ರವಾರ ಭಾರತದ ಷೇರು ಮಾರುಕಟ್ಟೆ ಕುಸಿತ ಕಂಡರೆ, ಪಾಕಿಸ್ತಾನವು ಮಿರಮಿರ ಮಿಂಚುತ್ತಿದೆ.

ಯುದ್ದದ ನಡುವೆಯೂ ಪಾಕಿಸ್ತಾನದ ಷೇರುಬಜಾರು ಏರಿಕೆ ಆಗುತ್ತಿರುವುದು ಕುತೂಹಲ ಮೂಡಿಸಿದೆ. ಪಾಕ್ ಷೇರು ಮಾರುಕಟ್ಟೆಯ ಪ್ರಮುಖ ಕರಾಚಿ-100 ಸೂಚ್ಯಂಕವು ಇಂದು ಶುಕ್ರವಾರ ಒಂದು ಹಂತದಲ್ಲಿ ಶೇ. 1.80ರಷ್ಟರವರೆಗೂ ಏರಿಕೆ ಆಗಿತ್ತು. ನಂತರ ನಿರಂತರವಾಗಿ ಇಳಿಕೆಯಾಗುತ್ತಾ ಬಂದು, ಈ ವರದಿ ಬರೆಯುವ ವೇಳೆಗೆ ಕೆಂಪು ಬಣ್ಣಕ್ಕೆ ತಿರುಗಿದೆ.

ಇನ್ನೊಂದೆಡೆ, ಭಾರತದ ಷೇರು ಮಾರುಕಟ್ಟೆ ಇಂದು ಶುಕ್ರವಾರ ಸ್ಪಷ್ಟ ಹಿನ್ನಡೆ ಕಂಡಿದೆ. ಸೆನ್ಸೆಕ್ಸ್ ಶೇ. 1.1ರಷ್ಟು ಇಳಿಕೆ ಆಗಿದೆ. ಬೆಳಗ್ಗೆ 11 ಗಂಟೆಗೆ ಸೆನ್ಸೆಕ್ಸ್ ಬರೋಬ್ಬರಿ 890 ಅಂಕಗಳಷ್ಟು ಕುಸಿತ ಕಂಡಿತ್ತು. ಬಿಎಸ್ಇನ ಬಹುತೇಕ ಎಲ್ಲಾ ಸೂಚ್ಯಂಕಗಳೂ ಕೂಡ ಹಿನ್ನಡೆ ಕಂಡಿವೆ. ಬಿಎಸ್ಇ ಮಾತ್ರವಲ್ಲ, ಎನ್ಎಸ್ಇಯ ಎಲ್ಲಾ ನಿಫ್ಟಿ ಸೂಚ್ಯಂಕಗಳೂ ಕೂಡ ಕಳೆಗುಂದಿವೆ.

ಭಾರತದ ಮಾರುಕಟ್ಟೆ ಕುಸಿತಕ್ಕೆ ಏನು ಕಾರಣ?

ಹೂಡಿಕೆದಾರರು ಭಾರತದ ಆರ್ಥಿಕತೆ ಬಗ್ಗೆ ಆಶಾಭಾವನೆ ಇಟ್ಟುಕೊಂಡಿದ್ದರು. ಈಗ ಪಾಕಿಸ್ತಾನದೊಂದಿಗಿನ ಸಂಘರ್ಷ ಅತಿರೇಕಕ್ಕೆ ಹೋಗುವ ಸಾಧ್ಯತೆ ಇರುವುದು ಹೂಡಿಕೆದಾರರ ಆಶಯವನ್ನು ಮಬ್ಬುಗೊಳಿಸಿದೆ. ಯುದ್ಧವಾದಲ್ಲಿ ಆರ್ಥಿಕತೆಗೆ ಧಕ್ಕೆಯಾಗುತ್ತದೆ ಎಂಬುದು ಒಂದು ಕಾರಣ.

ಮತ್ತೊಂದು ಕಾರಣ, ಅಮೆರಿಕದ ಡಾಲರ್ ಇಂಡೆಕ್ಸ್ ಮತ್ತೆ ಪ್ರಾಬಲ್ಯ ಪಡೆದಿರುವುದು. ಹಾಗೆಯೇ, ಏಷ್ಯಾದ ಕೆಲ ಪ್ರಮುಖ ಮಾರುಕಟ್ಟೆಗಳೂ ಕೆಳಗಿಳಿದಿವೆ. ಇದು ಭಾರತದ ಸೆನ್ಸೆಕ್ಸ್, ನಿಫ್ಟಿ ಮೇಲೆ ಪರಿಣಾಮ ಬೀರಿರಬಹುದು ಎಂದು ಭಾವಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!