
ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮತ್ತೊಂದು ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು, ವಿಶ್ವದಾದ್ಯಂತ ಖ್ಯಾತಿ ಪಡೆದಿರುವ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ವಿದೇಶಿ ವಿದ್ಯಾರ್ಥಿಗಳ ಪ್ರವೇಶವನ್ನು ನಿಷೇಧಿಸಿದೆ.
ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯಿಂದ ಹಾರ್ವರ್ಡ್ ವಿಶ್ವವಿದ್ಯಾಲಯದ ಬಗ್ಗೆ ನಡೆಯುತ್ತಿರುವ ತನಿಖೆಯಾಗಿ ಹೀಗೆ ಮಾಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಹಾರ್ವರ್ಡ್ ವಿಶ್ವವಿದ್ಯಾಲಯದ ವಿರುದ್ಧ ಅಸಮಾಧಾನಗೊಂಡಿದ್ದ ಡೊನಾಲ್ಡ್ ಟ್ರಂಪ್, ಹಾರ್ವರ್ಡ್ ಅನ್ನು ಇನ್ನು ಮುಂದೆ ಯೋಗ್ಯವಾದ ಕಲಿಕೆಯ ಸ್ಥಳವೆಂದು ಪರಿಗಣಿಸಲಾಗುವುದಿಲ್ಲ. ವಿಶ್ವದ ಶ್ರೇಷ್ಠ ವಿಶ್ವವಿದ್ಯಾಲಯಗಳು ಅಥವಾ ಕಾಲೇಜುಗಳ ಯಾವುದೇ ಪಟ್ಟಿಯಲ್ಲಿ ಈ ವಿಶ್ವವಿದ್ಯಾಲಯವನ್ನು ಪರಿಗಣಿಸಬಾರದು ಎಂದು ತಿಳಿಸಿದ್ದರು.
ಅಲ್ಲದೇ ಏಪ್ರಿಲ್ ತಿಂಗಳ ಆರಂಭದಲ್ಲಿಯೇ ತಮ್ಮ ಬೇಡಿಕೆಗೆ ಮಣಿಯದಿದ್ದರೆ, ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ವಿದೇಶಿ ವಿದ್ಯಾರ್ಥಿಗಳನ್ನು ಪಡೆಯುವುದನ್ನು ನಿಷೇಧಿಸುವುದಾಗಿ ಈ ಹಿಂದೆಯೇ ಬೆದರಿಕೆ ಹಾಕಿದ್ದರು. ಇದೀಗ ಟ್ರಂಪ್ ಸರ್ಕಾರ ವಿಶ್ವವಿದ್ಯಾಲಯಕ್ಕೆ ವಿದೇಶಿ ವಿದ್ಯಾರ್ಥಿಗಳ ಪ್ರವೇಶ ನಿಷೇಧಿಸಿದೆ.
ವಿಶ್ವವಿದ್ಯಾನಿಲಯದ ಅಂಕಿಅಂಶಗಳ ಪ್ರಕಾರ, ಹಾರ್ವರ್ಡ್ 2024-2025 ಶೈಕ್ಷಣಿಕ ವರ್ಷದಲ್ಲಿ ಸುಮಾರು 6,800 ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡಿದೆ. ಇದು ವಿಶ್ವವಿದ್ಯಾಲಯದ ಒಟ್ಟು ದಾಖಲಾತಿಯ 27% ರಷ್ಟಿದೆ. ಪ್ರತಿ ವರ್ಷ 500-800 ಭಾರತೀಯ ವಿದ್ಯಾರ್ಥಿಗಳು ಹಾರ್ವರ್ಡ್‌ನಲ್ಲಿ ಅಧ್ಯಯನ ಮಾಡುತ್ತಾರೆ. ಪ್ರಸ್ತುತ ಭಾರತದಿಂದ 788 ವಿದ್ಯಾರ್ಥಿಗಳು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.






