
ಗುಜರಾತ್‌ನ (Gujarat) ಸೂರತ್‌ನಲ್ಲಿ (Surat) 23 ವರ್ಷದ ಮಾಡೆಲ್ (Model) ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಅಂಜಲಿ ಅಲ್ಪೇಶ್ ವರ್ಮೋರಾ (Anjali Alpesh Varmora) ಎಂದು ಗುರುತಿಸಲಾಗಿದ್ದು, ಕಳೆದ ಕೆಲವು ವರ್ಷಗಳಿಂದ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದರು (Crime News).
ಸೂರತ್‌ನ ಡಿಸಿಪಿ ವಿಜಯ್ ಸಿಂಗ್ ಗುರ್ಜಾರ್ ಸೋಮವಾರ ಮಾತನಾಡಿ, “ಅಂಜಲಿ ಜೂ. 7 ಮತ್ತು 8ರ ರಾತ್ರಿ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರಂಭಿಕ ತನಿಖೆಯ ಪ್ರಕಾರ, ಅವರು ಹಲವು ವರ್ಷಗಳಿಂದ ಮಾಡೆಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಫ್ಯಾಷನ್ ಶೂಟ್‌ಗಳ ಜತೆಗೆ ಜವಳಿ ಮತ್ತು ವಾಣಿಜ್ಯ ಮಾಡೆಲಿಂಗ್ ಯೋಜನೆಗಳಲ್ಲಿಯೂ ಭಾಗಿಯಾಗಿದ್ದರು” ಎಂದಿದ್ದಾರೆ.
“ಅಂಜಲಿಗೆ ನಿಶ್ಚಿತಾರ್ಥವಾಗಿತ್ತು, ಈ ವರ್ಷ ವಿವಾಹವೂ ನಿಗದಿಯಾಗಿತ್ತು. ಆದರೆ, ವರನ ತಾಯಿಯ ನಿಧನದಿಂದ ಮುಂದಿನ ವರ್ಷಕ್ಕೆ ಮದುವೆಯನ್ನು ಮುಂದೂಡಲಾಗಿತ್ತು. ಆತ್ಮಹತ್ಯೆಗೆ ಮೊದಲು ಅಂಜಲಿ ವರನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು, ಆದರೆ ಅವರು ಆ ಸಮಯದಲ್ಲಿ ಸ್ಪಂದಿಸಲಿಲ್ಲ. ತನಿಖೆಯ ವೇಳೆ, ಅವರು ಒತ್ತಡದಲ್ಲಿರಲಿಲ್ಲ ಎಂದು ವರ ಹೇಳಿದ್ದಾರೆ. ಘಟನೆ ಸಂಭವಿಸಿದಾಗ ಅಂಜಲಿಯ ಕುಟುಂಬದವರು ಮನೆಯಲ್ಲಿ ಇರಲಿಲ್ಲ. ಮನೆಗೆ ಬಂದಾಗ ಕೊಠಡಿ ಒಳಗಿನಿಂದ ಲಾಕ್ ಆಗಿತ್ತು. ತನಿಖೆಯಲ್ಲಿ ಅಂಜಲಿ ಘಟನೆಗೆ ಮೊದಲು ಕೆಲವು ಭಾವನಾತ್ಮಕ ಸ್ಟೇಟಸ್‌ಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದರು, ಆದರೆ ಯಾವುದೇ ನಿರ್ದಿಷ್ಟ ಹೆಸರುಗಳನ್ನು ಉಲ್ಲೇಖಿಸಿರಲಿಲ್ಲ” ಎಂದು ಡಿಸಿಪಿ ಹೇಳಿದ್ದಾರೆ.
ಪೊಲೀಸರು ಘಟನೆಯ ಸಂದರ್ಭಗಳನ್ನು ಅರ್ಥ ಮಾಡಿಕೊಳ್ಳಲು ತನಿಖೆಯನ್ನು ಮುಂದುವರಿಸಿದ್ದಾರೆ. ಅಂಜಲಿಯ ಈ ನಿರ್ಧಾರದ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ಕುಟುಂಬದವರು, ವರ ಮತ್ತು ಸಂಬಂಧಿತರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ.






