
ರೀಲ್ಸ್ (Reels) ಮಾಡುವ ಫೋಟೋ (Photo) ತೆಗೆಸಿಕೊಳ್ಳುವ ಹುಚ್ಚು ಯಾರೆಲ್ಲಾ ಕೈನಲ್ಲಿ ಏನೆಲ್ಲಾ ಮಾಡಿಸುತ್ತೆ ಅಂತ ಹೇಳೋದು ಬಹಳ ಕಷ್ಟ. ಕೆಲವೊಮ್ಮೆ ಈ ರೀಲ್ಸ್ ಹಾಗೂ ಫೋಟೋಗಳೇ ಸಂಬಂಧವನ್ನ ಸಹ ಹಾಳು ಮಾಡುತ್ತದೆ. ಇದೀಗ ಫೋಟೋ ವಿಚಾರಕ್ಕೆ ಲವರ್ (Lover) ಬೈದ ಎಂದು ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಸ್ಟ್ರೀಟ್ ಫೋಟೋಗ್ರಾಫಿ ವಿಚಾರಕ್ಕೆ ಜಗಳ
ಚೈತನ್ಯ (22) ನೇಣಿಗೆ ಶರಣಾದ ಯುವತಿಯಾಗಿದ್ದು, ನಿನ್ನೆ ರೀಲ್ಸ್‌ವೊಂದನ್ನ ಸ್ಟೇಟಸ್ ನಲ್ಲಿ ಅಪ್ಲೋಡ್ ಮಾಡಿದ್ದಳು. ಅದರಲ್ಲಿ ರಸ್ತೆಯಲ್ಲಿ ನಿಂತು ಫೋಟೋಗಳನ್ನ ತೆಗೆಸಿಕೊಂಡಿದ್ದಳು. ಇದು ಆಕೆಯ ಪ್ರಿಯಕರನಿಗೆ ಇಷ್ಟವಾಗಿರಲಿಲ್ಲ. ಅದನ್ನ ಪ್ರಶ್ನಿಸಲು ಮನೆಯ ಬಳಿ ಬಂದಿದ್ದ, ಈ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿದೆ. ನಂತರ ಚೈತನ್ಯ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸಾವಿಗೆ ಪ್ರಿಯಕರ ಕಾರಣ ಎಂದು ಕುಟುಂಬಸ್ಥರ ಆರೋಪ
ತುಮಕೂರಿನ ಎಸ್ ಎಸ್ ಐಟಿ ಕಾಲೇಜಿನಲ್ಲಿ ಫೈನಲ್ ಇಯರ್ ಡಿಗ್ರಿ ವ್ಯಾಸಂಗ ಮಾಡುತಿದ್ದಳು. ಜೊತೆಗೆ ಮಾಡಲಿಂಗ್ ನ ಮೇಕಪ್ ಆರ್ಟಿಸ್ಟ್ ಸಹ ಆಗಿದ್ದ ಚೈತನ್ಯ, ಪಕ್ಕದ ಊರಿನ ವಿಜಯ್ ಕುಮಾರ್ ಎನ್ನುವ ಯುವಕನನ್ನ ಪ್ರೀತಿಸುತ್ತಿದ್ದಳು. ತಾಯಿ ಜೊತೆ ವಾಸವಿದ್ದ ಚೈತನ್ಯ ಮನೆಯ ಬಳಿ ರಾತ್ರಿ ವಿಜಯ್ ಕುಮಾರ್ ಬಂದು ಹೋದ ನಂತರ ಈ ಘಟನೆ ನಡೆದಿದೆ. ವಿಜಯ್ ಕುಮಾರ್ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದು, ಈ ಪ್ರೀತಿ ವಿಚಾರ ತಿಳಿದು ಯುವತಿ ಮಾವ ವಾರ್ನ್ ಮಾಡಿದ್ದರು ಎನ್ನಲಾಗುತ್ತಿದೆ. ಇನ್ನು ಚೈತನ್ಯ ಸಾವಿಗೆ ವಿಜಯ್ ಕುಮಾರ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ವಿಜಯ್ ಕುಮಾರ್‌ನನ್ನ ವಶಕ್ಕೆ ಪಡೆದಿದ್ದು, ತನಿಖೆ ನಡೆಸಲಾಗುತ್ತಿದೆ.






