ಪುತ್ತೂರು: ಕಳೆದ ಕೆಲವು ದಿನಗಳ ಹಿಂದೆ ಪ್ರತೀ ಗ್ರಾಪಂ ಕಚೇರಿ ಮುಂದೆ ಬಿಜೆಪಿಯವರು ಪ್ರತಿಭಟನೆ ಮಾಡಿ 13 ಸುಳ್ಳುಗಳನ್ನು ಗಾಳಿಯಲ್ಲಿ ತೇಲಿಬಿಟ್ಟು ಜನರನ್ನು ಮಂಗ ಮಾಡಿ ತೆರಳಿದ್ದರು ಅದಕ್ಕೆ ತಕ್ಕ ಉತ್ತರ ನೀಡುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಈಶ್ವರಮಂಗಲದಲ್ಲಿ ನಡೆದ ಬಿಜೆಪಿ ಸುಳ್ಳುಗಳಿಗೆ ಉತ್ತರ ಜನ ಜಾಗೃತಿ ಸಭೆಯಲ್ಲಿ ಮಾತನಾಡಿದರು.
ಬಿಜೆಪಿಯವರು ಹೇಳಿದ 13 ಸುಳ್ಳುಗಳನ್ನು ನಾವು ಒಡೆದು ಹಾಕಿದ್ದೇವೆ. 14  ಕಡೆ ವಿವಿಧ ಗ್ರಾಮಗಳಲ್ಲಿ ಜಾಗೃತಿ ಸಭೆಯನ್ನು ಮಾಡಿದ್ದೇವೆ ,ಹೋದ ಕಡೆಗಳಲ್ಲಿ ಜನರಿಂದ ಉತ್ತಮ ಬೆಂಬಲವೂ ವ್ಯಕ್ತವಾಗಿದೆ ಎಂದು ಹೇಳಿದರು.

ಎಕ್ರೆಗೆ ಎರಡು ಲಕ್ಷ ಲಂಚ:
ಬಿಜೆಪಿ ಶಾಸಕರಿರುವಾಗ ಅಕ್ರಮ ಸಕ್ರಮಕ್ಕೆ ಎಕ್ರೆಗೆ ಎರಡು ಲಕ್ಷ ರೂ ಲಂಚ ಪಡೆದಿದ್ದರು. ಇದು ಸತ್ಯ ಎಂದಹ ನಾನು ಎಲ್ಲಿ ಬೇಕಾದರೂ ಹೇಳುತ್ತೇನೆ. ಹಣ ಕೊಡದವರ ಅಕ್ರಮ ಸಕ್ರಮ ಫೈಲಿಗೆ ಕುಮ್ಕಿ ಎಂದು ಬರೆದು ಅವರಿಗೆ ಎಂದೆಂದೂ ಅಕ್ರಮ ಸಕ್ರಮ ಮಾಡದಂತೆ ಮಾಡಿದ್ದು ಇದು ಬಡವರಿಗೆ ಮಾಡಿರುವ ದ್ರೋಹ ಎಂದು ಹೇಳಿದರು.


ನಿವೇಶನಕ್ಕೆ 300 ಎಕ್ರೆ ಜಾಗ ಮೀಸಲು:
ಬಿಜೆಪಿಯವರು ಬಡವರಿಗೆ ಯಾವುದೇ ನಿವೇಶನ ನೀಡಿಲ್ಲ. ಕಳೆದ ಬಾರಿ ಶಾಸಕರಾಗಿದ್ದವರು  ಯಾರಿಗೆಲ್ಲಾ ನಿವೇಶನ ನೀಡಿದ್ದಾರೆ ಎಂಬುದನ್ನು ಬಿಜೆಪಿ ಬಹಿರಂಗ ಮಾಡಲಿ. ನಾನು ಸ್ವಂತ ಭೂಮಿ ಖರೀದಿ ಮಾಡಿ ಅದರಲ್ಲಿ 250 ಮನೆಯನ್ನೂ ನಿರ್ಮಾಣ ಮಾಡಿಕೊಡುತ್ತೇನೆ . ನೀವೆಷ್ಟು ಮನೆ ಕೊಟ್ಟಿದ್ದೀರಿ ಬಡವರಿಗೆ ಅದನ್ನು ಬಹಿರಂಗ‌ಮಾಡಿ ಎಂದು ಶಾಸಕರು ಸವಾಲು ಹಾಕಿದರು.


ದ್ವೇಷ ಭಾಷಣ ಮಾಡಿದ್ರೆ ಟೈಟ್ ಕೇಸ್ ಹಾಕ್ತೇವೆ:

ಯಾರೇ ಆಗಲಿ  ಸಮಾಜದಲ್ಲಿ ದ್ವೇಷ ಭಾಷಣ ಮಾಡಿ ಸಾಮರಸ್ಯ ಕೆಡಿಸಿದರೆ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಹೊಸ ಎಸ್ಪಿ, ಕಮಿಷನರ್ ರನ್ನು ಜಿಲ್ಲೆಗೆ ನೇಮಿಸಿದ್ದೇವೆ. ಈಗ ಮಾತನಾಡಿದ್ರೆ ಟೈಟ್ ಕೇಸ್ ಬೀಳ್ತದೆ. ಈಗ ಮಾತಾಡಿ ನೋಡುವ ಕೂಡಲೇ ಒಳಗೆ ಹಾಕ್ತಾರೆ, ಚಡ್ಡಿಯಲ್ಲಿ‌ನಿಲ್ಲಿಸಿ ಫೊಟೋ ತೆಗಿತಾರೆ. ಗಲಾಟೆ ಮಾಡ್ಲಿಕ್ಕೆ, ದ್ವೇಷ ಭಾಷಣ ಮಾಡ್ಲಿಕ್ಕೆ ಯಾರೂ ಹೋಗಬೇಡಿ ಅದಕ್ಕೆಲ್ಲಾ ಕಾಂಗ್ರೆಸ್ ಕಡಿವಾಣ ಹಾಕಿದೆ. ಬಾಲ ಬಿಚ್ಚಿದರೆ ಬಾಲವನ್ನು ಕಟ್ ಮಾಡ್ತೇವೆ ಎಂದು ಶಾಸಕರು ಹೇಳಿದರು.


ಇನ್ನು ಬಿಜೆಪಿಯ ಸುಳ್ಳು ನಡೆಯುವುದಿಲ್ಲ

ಬಿಜೆಪಿಯವರು ಇಷ್ಟು ದಿನ ಸುಳ್ಳು ಹೇಳಿಕೊಂಡು ಅದರ ಲಾಭ ಪಡೆಯುತ್ತಿದ್ದರು. ಇನ್ನು ಅವರ ಸುಳ್ಳು ಭಾಷಣ ಮಾಡಿದ್ರೆ ತಕ್ಕ ಉತ್ತರ ಕೊಡ್ತೇವೆ ಇನ್ನು ಡೊಂಬರಾಟ ನಡೆಯಲು ಬಿಡುವುದಿಲ್ಲ ಎಂದು ಹೇಳಿದ ಶಾಸಕರು ಬಿಜೆಪಿ ಯವರ ಸುಳ್ಳು ಭಾಷಣ ವನ್ನು ಎಷ್ಟು ರಸವತ್ತಾಗಿ ಹೇಳುತ್ತಾರೆಂದರೆ ಸಾಹಿತಿಗಳೇ ನಾಚಿಕೆ ಪಡುವ ರೀತಿಯಲ್ಲಿ ಇವರು ರೈಲು ಬಿಡುತ್ತಿದ್ದಾರೆ ಎಂದು ಹೇಳಿದರು.

ನಮ್ಮ ತಂಟೆಗೆ ಬರಬೇಡಿ:
ನೀವು ನಮ್ಮ ತಂಟೆಗೆ ಬರಬೇಡಿ ನಾವು ನಿಮ್ಮ ತಂಟೆಗೆ ಬಂದಿಲ್ಲ, ಸುಳ್ಳು ಹೇಳುತ್ತಾ ನಿಮ್ಮ ಹಳೆಯ ಬುದ್ದಿಯನ್ನು ತೋರಿಸಲು ಬರಬೇಡಿ. ಈಗ ನಮಗೂ ತಾಕತ್ತಿದೆ ನಿಮ್ಮ‌ಜನ್ಮ ಜಾಲಾಡುತ್ತೇವೆ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದರು.


ಗ್ಯಾಸಿಗೆ, ಅಕ್ಕಿಗೆ ರೇಟ್ ಜಾಸ್ತಿ ಮಾಡಿದ್ದು ಬಿಜೆಪಿ:

ಅಡುಗೆ ಅನಿಲಕ್ಕೆ ಬೆಲೆ ಏರಿಕೆ ಮಾಡಿದ್ದು ಕೇಂದ್ರದ ಬಿಜೆಪಿ ಸರಕಾರ, ಅಕ್ಕಿಗೂ ದರ ಹೆಚ್ಚು ಮಾಡಿದ್ದು ಬಿಜೆಪಿ ಸರಕಾರ ಆದರೆ ಬಿಜೆಪಿಯವರು ಅದನ್ನು ಕಾಂಗ್ರೆಸ್ ತಲೆಗೆ ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. ಬಿಜೆಪಿಯವರ ಸುಳ್ಳು ಜನರಿಗೆ ಅರ್ಥವಾಗಿದೆ,ಜನ ಯಾರೂ ಈಗ ಪೆದ್ದರಲ್ಲ ಬುದ್ದಿವಂತರಿದ್ದಾರೆ ಎಂದು ಶಾಸಕರು ಹೇಳಿದರು.
ವೇದಿಕೆಯಲ್ಲಿ ಬ್ಲಾಕ್ ಅಧ್ಯಕ್ಷ ಕೆ ಪಿ ಆಳ್ವ, ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ, ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕುಂಬ್ರ ದುರ್ಗಾ ಪ್ರಸಾದ್ ರೈ,  ಮೂಸಾನ್ , ರೈ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಣ ಸುದೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಶ್ರೀರಾಂ ಪಕ್ಕಳ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!