
ಮುಂಬೈ: 75 ವರ್ಷ ತುಂಬಿದ ರಾಜಕಾರಣಿಗಳು ಸಾರ್ವಜನಿಕ ಜೀವನದಿಂದ ನಿವೃತ್ತರಾಗಬೇಕು ಎಂಬ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಅವರು 75 ವರ್ಷ ತುಂಬಿದ ನಂತರ ನಾಯಕರು ಜವಾಬ್ದಾರಿಗಳನ್ನು ಇತರರಿಗೆ ವರ್ಗಾಯಿಸಿ ವಿಶ್ರಾಂತಿ ಪಡೆಯಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮೋಹನ್ ಭಾಗವತ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನೇ ಟಾರ್ಗೆಟ್ ಮಾಡಿ ಹೇಳಿದ್ದಾರೆ ಎಂದು ವಿಪಕ್ಷಗಳ ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಬುಧವಾರ ಸಂಜೆ ನಾಗ್ಪುರದಲ್ಲಿ ದಿವಂಗತ ಆರ್‌ಎಸ್‌ಎಸ್ ಸಿದ್ಧಾಂತವಾದಿ ಮೋರೋಪಂತ ಪಿಂಗಳೆಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ನಿಮಗೆ 75 ವರ್ಷ ತುಂಬಿದಾಗ, ನೀವು ಈಗಲೇ ನಿಲ್ಲಿಸಿ ಇತರರಿಗೆ ದಾರಿ ಮಾಡಿಕೊಡಬೇಕು ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ಕೆಲವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಯಸ್ಸಿಗೆ ಸಂಬಂಧಿಸಿ ಕೂಡ ವೀಕ್ಷಿಸಿದ್ದಾರೆ, ಏಕೆಂದರೆ ಮೋದಿ ಈ ವರ್ಷದ ಸೆಪ್ಟೆಂಬರ್ ಗೆ 75 ವರ್ಷ ಪೂರೈಸಲಿದ್ದಾರೆ. ಭಾಗವತ್ ಅವರ ಹೇಳಿಕೆ ಬಿಜೆಪಿಯ 75 ವರ್ಷದ ನಿವೃತ್ತಿ ಸೂತ್ರವನ್ನು ಮತ್ತೆ ಚರ್ಚೆಗೆ ತಂದಿದ್ದು, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಇದನ್ನು ರಾಜಕೀಯವಾಗಿ ಲೇವಡಿ ಮಾಡಿವೆ.
75 ವರ್ಷದೊಳಗೆ ನಾಯಕರು ನಿವೃತ್ತಿ ಹೊಂದಬೇಕು ಎಂಬ ಭಾಗವತ್ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ ಮತ್ತು ಇದನ್ನು ಪ್ರಧಾನಿ ಮೋದಿ ಅವರ ಭವಿಷ್ಯದ ಬಗ್ಗೆ ಕೂಡ ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ. ಮೋಹನ್ ಭಾಗವತ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನೇ ಟಾರ್ಗೆಟ್ ಮಾಡಿ ಹೇಳಿದ್ದಾರೆ ಎಂದು ವಿಪಕ್ಷಗಳು ಹೇಳಿಕೆ ನೀಡಿದೆ. ಇದು ಆರ್‌ಎಸ್‌ಎಸ್ ಮತ್ತು ಬಿಜೆಪಿ ಆಂತರಿಕ ಸಂಘರ್ಷ ಇದೀಗ ಬಯಲಾಗಿದೆ ಎಂದು ವಿಶ್ಲೇಷಿಸಲಾಗಿದೆ.





