
ಮಂಗಳೂರಿನ ಹೆಸರಾಂತ ಉದ್ಯಮ ಸಂಸ್ಥೆ ರೋಹನ್ ಕಾರ್ಪೊರೇಷನ್ ತನ್ನ ಅಧಿಕೃತ ಬ್ರ್ಯಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಘೋಷಣೆ ಮಾಡಿದೆ.
ಭಾರತ್ ಮಾಲ್‌ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ, ವಿಡಿಯೊ ಪರದೆಯ ಮೇಲೆ ಬ್ರ್ಯಾಂಡ್ ಅಂಬಾಸಿಡರ್ ವಿಡಿಯೊ ಪ್ರದರ್ಶಿಸಲಾಯಿತು.
ರೋಹನ್ ಕಾರ್ಪೊರೇಷನ್‌ನ ಸ್ಫೂರ್ತಿದಾಯಕ ಪಯಣ ಮತ್ತು ಶಾರೂಖ್ ಖಾನ್ ಅವರ ಶ್ರಮ ಮತ್ತು ವ್ಯಕ್ತಿತ್ವದ ಯಶೋಗಾಥೆಗಳು ಈ ವಿಡಿಯೊದಲ್ಲಿ ಬಿಂಬಿತವಾದವು.
ಕರ್ನಾಟಕದಲ್ಲಿ ಮೊದಲ ಬಾರಿಗೆ ಶಾರೂಖ್ ಖಾನ್ ಸಂಸ್ಥೆಯೊಂದಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಮೂಲಕ ರೋಹನ್ ಕಾರ್ಪೊರೇಷನ್ ಮಂಗಳೂರು ನಗರವನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ ಎಂದು ತಿಳಿಸಲಾಯಿತು.
ಸಂಸ್ಥಾಪಕ ರೋಹನ್ ಮೊಂತೇರೊ ಮಾತನಾಡಿ, ‘ಶಾರೂಖ್ ಖಾನ್ ಅವರಂತಹ ಪ್ರಭಾವಿ ವ್ಯಕ್ತಿ ನಮ್ಮ ಜೊತೆಗೆ ಇರುವುದರಿಂದ, ನಮ್ಮ ಯಶಸ್ಸನ್ನು ಇನ್ನೂ ಎತ್ತರಕ್ಕೆ ವಿಸ್ತರಿಸುವ ಆತ್ಮವಿಶ್ವಾಸ ಬಂದಿದೆ. 25ಕ್ಕೂ ಹೆಚ್ಚು ಯಶಸ್ವಿ ಯೋಜನೆಗಳೊಂದಿಗೆ, ರೋಹನ್ ಕಾರ್ಪೊರೇಷನ್ ಒಂದು ಜಾಗತಿಕ ಹಾದಿಗೆ ಕಾಲಿಟ್ಟಿದೆ’ ಎಂದರು. ನಿರೂಪಕಿ ರೀನಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.






