
ಪುತ್ತೂರು: ಪುತ್ತೂರಿನ ಅರುಣಾ ಕಲಾಮಂದಿರದಿಂದ ಎ.ಪಿ.ಎಂ.ಸಿ.ವರೆಗೆ ಸಂಪರ್ಕಿಸುವ ಪ್ರಮುಖ ರಸ್ತೆಯಾದ ಆದರ್ಶ ಆಸ್ಪತ್ರೆ ಮುಂಭಾಗ ಜುಲೈ 16, ಬುಧವಾರ ಬೆಳಗ್ಗೆ ಸುರಿದ ಭಾರಿ ಮಳೆಗೆ ಸಂಪೂರ್ಣ ಜಲಾವೃತಗೊಂಡಿದೆ.
ಇದೇ ರಸ್ತೆ ಹಿಂದಿನ ಹಲವಾರು ಬಾರಿ ಸಣ್ಣ ಮಳೆಯಲ್ಲಿಯೇ ಜಲಾವೃತವಾಗಿದ್ದರೂ, ಸಂಬಂಧಪಟ್ಟ ನಗರ ಆಡಳಿತ ಅಥವಾ ಸಂಬಂಧಿತ ಇಲಾಖೆಯ ಅಧಿಕಾರಿಗಳು ಯಾವುದೇ ಶಾಶ್ವತ ಪರಿಹಾರ ಒದಗಿಸಲು ಮುಂದಾಗಿಲ್ಲ. ಚರಂಡಿ ದುರಸ್ತಿ ಕೆಲಸವೂ ಸರಿಯಾಗಿ ನಡೆಯದೇ ಇದ್ದ ಕಾರಣ, ಒಂದೆರಡು ಗಂಟೆಗಳ ಮಳೆಯಲ್ಲಿಯೇ ರಸ್ತೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗುತ್ತಿದೆ. ಪರಿಣಾಮವಾಗಿ ವಾಹನಗಳು ನೀರಿನಲ್ಲಿ ತೇಲುವಂತಾಗಿದ್ದು, ಸಾರ್ವಜನಿಕರಿಗೆ ತೀವ್ರ ಅಸೌಕರ್ಯ ಉಂಟಾಗುತ್ತಿದೆ.
ಪರಿಸರದ ಇತರ ಭಾಗಗಳಲ್ಲೂ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಯ ನೀರು ಕಾಂಕ್ರೀಟ್ ರಸ್ತೆಗಳ, ರಾಜ್ಯ ಹೆದ್ದಾರಿ ಹಾಗೂ ಗ್ರಾಮೀಣ ರಸ್ತೆಗಳ ಮೇಲೆ ಹರಿಯುತ್ತಿದೆ. ಇದರಿಂದ ಸ್ಥಳೀಯರ ಓಡಾಟಕ್ಕೂ ತೊಂದರೆ ಉಂಟಾಗಿದೆ. ಕೆಲವೆಡೆ ಮನೆಗಳ ಅಂಗಳ ಹಾಗೂ ಅಂಗಡಿಗಳೊಳಗೂ ಮಳೆಯ ನೀರು ನುಗ್ಗಿರುವ ದೃಶ್ಯಗಳು ಕಂಡುಬಂದಿವೆ.
ಮಳೆಗಾಲ ಆರಂಭವಾಗಿದ್ದರೂ ಸಹ ಚರಂಡಿಗಳ ಶುದ್ಧೀಕರಣ ಮತ್ತು ನಿರ್ವಹಣೆಯ ಕೊರತೆಯಿಂದ ಈ ಪರಿಸ್ಥಿತಿ ಉಂಟಾಗುತ್ತಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ದರಿಂದ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪುತ್ತೂರು ನಗರ ಆಡಳಿತವು ತಕ್ಷಣ ಶಾಶ್ವತ ಪರಿಹಾರ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.






