
ಕಡಬ: ಮುಂದಿನ ಆಗಸ್ಟ್‌ನಲ್ಲಿ ನಿರೀಕ್ಷೆಯಲ್ಲಿರುವ ಕಡಬ ಪಟ್ಟಣ ಪಂಚಾಯತ್ ಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 27ರಂದು ಮಹತ್ವದ ಸಭೆಯು ಮಂಗಳೂರು ಗ್ರಾಮಾಂತರ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಅವರ ನೇತೃತ್ವದಲ್ಲಿ ಕಲಾರ್‌ನ ರಮಳಾನ್ ಸನ್ ರೈಸ್ ನಿವಾಸದಲ್ಲಿ ನಡೆಯಿತು.
ಸಭೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ತಯಾರಿಸಿ, ಅಂತಿಮ ಅನುಮೋದನೆಗಾಗಿ ಜಿಲ್ಲಾ ಸಮಿತಿಗೆ ಕಳುಹಿಸಲಾಗಿದೆ. ಕಡಬ ಪಟ್ಟಣ ಪಂಚಾಯತ್ ಗೆ ಕಳೆದ ಐದು ವರ್ಷಗಳಿಂದ ಚುನಾವಣೆ ನಡೆಯದೆ ಬಾಕಿಯಿದ್ದರೆಂದು ಉಲ್ಲೇಖಿಸಿ, ಈಗ ಚುನಾವಣೆ ಆಯೋಗವು ಚುನಾವಣಾ ಘೋಷಣೆ ಮಾಡಿದರೂ 18 ದಿನ ಕಳೆದಿದ್ದರೂ ಸಹ ವಾರ್ಡ್ ವಿಂಗಡನೆ ಹಾಗೂ ಮತದಾರರ ಪಟ್ಟಿ ಪ್ರಕಟವಾಗದೆ ಇರುವುದರ ಬಗ್ಗೆ ಸಭೆಯಲ್ಲಿ ಗಂಭೀರ ಆಕ್ರೋಶ ವ್ಯಕ್ತವಾಯಿತು. ಇದನ್ನು ಚುನಾವಣಾ ವ್ಯವಸ್ಥೆಯ ಗಂಭೀರ ಲೋಪವೆಂದು ನಿರ್ಧರಿಸಿ, ಈ ಕುರಿತು ಆಯೋಗಕ್ಕೆ ಅಧಿಕೃತವಾಗಿ ದೂರು ನೀಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಸಿದ್ದೀಕ್ ಅಲೆಕ್ಕಾಡಿ ಅವರನ್ನು ಪಟ್ಟಣ ಪಂಚಾಯತ್ ಚುನಾವಣೆ ಜಿಲ್ಲಾ ಉಸ್ತುವಾರಿಯಾಗಿ, ಹಾಗೂ ವಿಕ್ಟರ್ ಮಾರ್ಟೀಸ್ ಅವರನ್ನು ಸುಳ್ಯ ಕ್ಷೇತ್ರ ಸಮಿತಿ ಉಸ್ತುವಾರಿಯಾಗಿ ನೇಮಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಅನ್ವರ್ ಸಾದತ್ ಅವರು, “ಪಕ್ಷದ ಎಲ್ಲ ಕಾರ್ಯಕರ್ತರು, ನಾಯಕರು ಮುಂಬರುವ ದಿನಗಳಲ್ಲಿ ಶ್ರಮಪಟ್ಟು ಚುನಾವಣಾ ಕಾರ್ಯಗಳಿಗೆ ತೊಡಗಿಸಿಕೊಳ್ಳಬೇಕು. ಮನೆ ಮನೆಗೆ ಹೋಗಿ ಮತದಾರರೊಂದಿಗೆ ಸಮಾಲೋಚನೆ ಮಾಡಿ, ಎಸ್‌ಡಿಪಿಐ ಪಕ್ಷದ ಅಗತ್ಯತೆ ಮತ್ತು ಆದರ್ಶಗಳನ್ನು ಪರಿಚಯಿಸಿ, ಅಭ್ಯರ್ಥಿಗಳ ಜಯಕ್ಕಾಗಿ ಸದಾ ಸಜ್ಜಾಗಿರಬೇಕು” ಎಂದು ಉತ್ಸಾಹಭರಿತ ಕರೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ, ಸುಳ್ಯ ಕ್ಷೇತ್ರ ಅಧ್ಯಕ್ಷ ಮೀರಾಝ್ ಸುಳ್ಯ, ಕಡಬ ಬ್ಲಾಕ್ ಅಧ್ಯಕ್ಷ ಬಶೀರ್ ಕಡಬ, ಕಾರ್ಯದರ್ಶಿ ಸಿದ್ದೀಕ್ ನೆಲ್ಯಾಡಿ, ಕ್ಷೇತ್ರ ಹಾಗೂ ಬ್ಲಾಕ್ ಸಮಿತಿ ಸದಸ್ಯರು ಮತ್ತು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ವಿವಿಧ ಪ್ರಭುತ್ವ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲು ವಿವಿಧ ಉಸ್ತುವಾರಿಗಳನ್ನು ನೇಮಕಗೊಳಿಸಲಾಯಿತು.






