
ಧರ್ಮಸ್ಥಳ, ಆ.6: ಇಂದು ಧರ್ಮಸ್ಥಳದಲ್ಲಿ ಉಂಟಾದ ಘರ್ಷಣೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ತೀವ್ರ ಉದ್ವಿಗ್ನತೆಯ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಇದೀಗ ಜನರನ್ನು ಚದುರಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲಾಗಿದೆ ಎಂದು ಪೊಲೀಸರ ಮೂಲಗಳು ತಿಳಿಸಿವೆ.
ಈ ಮಧ್ಯೆ, ಘಟನೆಯ ಸಂಬಂಧ ಹಲವು ಎಫ್‌ಐಆರ್‌ಗಳನ್ನು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗುತ್ತಿದೆ.
ದಾಖಲಾದ ಪ್ರಮುಖ ಪ್ರಕರಣಗಳು:
1. ಯೂಟ್ಯೂಬರ್‌ಗಳ ಮೇಲೆ ಹಲ್ಲೆ ಮತ್ತು ವಾಹನ ಹಾನಿ: ಧರ್ಮಸ್ಥಳ ಬೆಂಬಲಿಗರೊಬ್ಬರ ಗುಂಪು ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣ ಮತ್ತು ಅವರ ಎರಡು ವಾಹನಗಳಿಗೆ ಹಾನಿಯುಂಟುಮಾಡಿದ ಕುರಿತು ಪ್ರಕರಣ ದಾಖಲೆಯಾಗುತ್ತಿದೆ. ಅಲ್ಲದೆ, ಯೂಟ್ಯೂಬರ್‌ಗಳ ಬೆಂಬಲಿಗರು ಖಾಸಗಿ ಸುದ್ದಿಚಾನೆಲ್ ವರದಿಗಾರರ ಮೇಲೆ ಹಲ್ಲೆ ನಡೆಸಿದ ಆರೋಪವೂ ದಾಖಲಾಗಿದೆ.
2. ಕಾನೂನುಬಾಹಿರ ಗುಂಪು ಸೇರಿಕೆ ಪ್ರಕರಣ: ಧರ್ಮಸ್ಥಳ ಪಾಂಗಾಳ (ಲಾಠಿಚಾರ್ಜ್ ನಡೆದ ಸ್ಥಳ), ಧರ್ಮಸ್ಥಳ ಪೊಲೀಸ್ ಠಾಣಾ ಆವರಣ ಹಾಗೂ ಸ್ಥಳೀಯ ಆಸ್ಪತ್ರೆಯ ಮುಂಭಾಗದಲ್ಲಿ ಕಾನೂನುಬಾಹಿರ ಗುಂಪು ಸೇರಿದ್ದ ಆರೋಪದ ಮೇಲೆ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ.
ಘಟನೆ ವೇಳೆ ಗಾಯಗೊಂಡಿರುವವರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಬಗ್ಗೆ ವೈದ್ಯರೊಂದಿಗೆ ನಡೆಸಿದ ಪ್ರಾಥಮಿಕ ವಿಚಾರಣೆಯಲ್ಲಿ ಯಾವುದೇ ಗಂಭೀರ ಗಾಯಗಳಿಲ್ಲ ಎಂದು ಮೌಖಿಕವಾಗಿ ತಿಳಿಸಲಾಗಿದೆ.
ಪೊಲೀಸರು ಈಗಾಗಲೇ ಸ್ಥಳದಲ್ಲಿನ ಸಿಸಿಟಿವಿ ಹಾಗೂ ವೈರಲ್ ವಿಡಿಯೋಗಳನ್ನು ಪರಿಶೀಲನೆಗೆ ತೆಗೆದುಕೊಂಡಿದ್ದು, ಅದರ ಆಧಾರದಲ್ಲಿ ಮತ್ತಷ್ಟು ಪ್ರಕರಣಗಳನ್ನು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ವರದಿಯಾಗಿದೆ.









