ನಾನಾ ಜಾತಿಗಳ ಮುಂದೆ ಕ್ರಿಶ್ಚಿಯನ್ ಎಂಬ ಪದ ಸೇರಿಸಿದ್ದ ವಿಚಾರದ ತೀವ್ರ ಸ್ವರೂಪದ ವಿವಾದ ಹುಟ್ಟುಹಾಕಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವೇಳೆ ಲಿಂಗಾಯತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಹೀಗೆ 33 ಜಾತಿಗಳನ್ನು ಅಧಿಕೃತವಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಬಿಟ್ಟಿದೆ.

ರವಿವಾರ ಈ ಕುರಿತು ದೇವರಾಜು ಅರಸು ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್, ಸೆ.22ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ರಾಜ್ಯಾದ್ಯಂತ ನಡೆಯಲಿದ್ದು, ಇದರಲ್ಲಿ ಪಟ್ಟಿ ಮಾಡಿರುವ 1,561 ಜಾತಿಗಳ ಪೈಕಿ 33 ಜಾತಿಗಳನ್ನು ಕೈಬಿಡಲಾಗಿದೆ ಎಂದು ಪ್ರಕಟಿಸಿದರು.

ಈ ಹಿಂದಿನ ಕಾಂತರಾಜು ಆಯೋಗದ ಸಮೀಕ್ಷೆಯಲ್ಲಿ ಇದ್ದ ಮಾಹಿತಿ, ಕಲಂಗಳನ್ನೇ ಉಪಯೋಗಿಸಿಕೊಂಡು ಸರ್ವೇ ಮಾಡಲಾಗುತ್ತಿದೆ. ಇದರಿಂದ ಕಾನೂನು ಉಲ್ಲಂಘನೆ ಆಗಿಲ್ಲ. ಈ ಮಾಹಿತಿಯನ್ನು ಸಮುದಾಯಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿಗಳನ್ನು ಪಟ್ಟಿ ಮಾಡುತ್ತೇವೆ ಹೊರತು ಬೇರೆ ಉದ್ದೇಶಕ್ಕಾಗಿ ಉಪಯೋಗ ಮಾಡುವುದಿಲ್ಲ ಎಂದರು.

ಇನ್ನೂ, ಈ ಹಿಂದೆಯೇ ಆಯೋಗ ಸಮೀಕ್ಷೆ ನಡೆಸುವ ಮೊದಲೇ ಬಿಟ್ಟು ಹೋದ ಜಾತಿಗಳನ್ನು ಗಮನಕ್ಕೆ ತನ್ನಿ ಎಂದು ಜಾಗೃತಿ ಮೂಡಿಸುವ ಪ್ರಕಟನೆಯೊಂದನ್ನು ಸಾರ್ವಜನಿಕವಾಗಿ ಪ್ರಕಟಿಸಿತ್ತು.ಇದಾದ ಬಳಿಕ ಅನೇಕರು ತಮ್ಮ ಜಾತಿಗಳನ್ನು ಪರಿಗಣಿಸುವಂತೆ ಕೋರಿದ್ದರು. ಅದರಂತೆ 148 ಜಾತಿಗಳನ್ನು ಸಮೀಕ್ಷೆಯಲ್ಲಿ ಸೇರಿಸಲಾಗಿದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ತಿಳಿಸಿದರು.

ಇನ್ನೂ, ಜಾತಿ ಕೈಬಿಡಲಾಗಿದೆ ಎಂದು ಯೋಚನೆ ಮಾಡುವ ಅಗತ್ಯವಿಲ್ಲ. ಅರ್ಹ ಜಾತಿಯವರು ತಮ್ಮ ಮೂಲವನ್ನು ಸಮೀಕ್ಷೆದಾರರಿಗೆ ತಿಳಿಸಿ ಉಲ್ಲೇಖ ಮಾಡಬಹುದು ಎಂದೂ ಅವರು ತಿಳಿಸಿದರು.

ಏನಿದು ವಿವಾದ?:

ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಬಳಿಕವೂ ನಾನಾ ಕಾರಣಕ್ಕಾಗಿ ಮೂಲ ಜಾತಿಯನ್ನೂ ಸೇರಿಸಿಕೊಂಡು ಕ್ರಿಶ್ಚಿಯನ್ ಎಂಬುದಾಗಿ ಗುರುತಿಸಿಕೊಂಡಿರುವ ಜಾತಿಗಳ ಹೆಸರು ಆಯೋಗ ಪ್ರಕಟಿಸಿರುವ ಜಾತಿಗಳ ಪಟ್ಟಿಯಲ್ಲಿ ದಾಖಲಾಗಿತ್ತು.

ಬ್ರಾಹ್ಮಣ ಕ್ರಿಶ್ಚಿಯನ್, ಲಿಂಗಾಯಿತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ವಾಲ್ಮೀಕಿ ಕ್ರಿಶ್ಚಿಯನ್, ಆದಿ ಆಂಧ್ರ ಕ್ರಿಶ್ಚಿಯನ್, ಆದಿ ದ್ರಾವಿಡ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್ ಸೇರಿದಂತೆ ಸುಮಾರು 46 ಜಾತಿಗಳ ಹೆಸರಿನೊಂದಿಗೆ ಕ್ರಿಶ್ಚಿಯನ್ ಎಂಬುದಾಗಿ ದಾಖಲಿಸಿರುವುದು ಕಂಡುಬಂದಿತ್ತು.

ಇದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ನಾನಾ ಜಾತಿ- ಸಮುದಾಯಗಳ ನಾಯಕರು, ಸ್ವಾಮೀಜಿಗಳು ಸಹ ಮತಾಂತರದ ಬಳಿಕ ಹಿಂದೂ ಮೂಲ ಜಾತಿಯನ್ನು ಸೇರಿಸಿಕೊಂಡು ಕ್ರಿಶ್ಚಿಯನ್ ಎಂಬುದಾಗಿ ದಾಖಲಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಹಲವು ಸಚಿವರು, ಶಾಸಕರಿಂದಲೂ ಪರೋಕ್ಷವಾಗಿ ಈ ಬಗ್ಗೆ ಆಕ್ಷೇಪ ಕೇಳಿಬಂದಿತ್ತು. ಸಚಿವ ಸಂಪುಟ ಸಭೆಯಲ್ಲೂಈ ಬಗ್ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರಕಾರವು ಜನಾಭಿಪ್ರಾಯ, ಆಕ್ಷೇಪಗಳ ಬಗ್ಗೆ ಆಯೋಗದ ಗಮನಕ್ಕೆ ತಂದಿತ್ತು.

ಆಧಾರ್ ಕಡ್ಡಾಯ..!

ಆಧಾರ್ ಕಡ್ಡಾಯಗೊಳಿಸಲಾಗಿದ್ದು, ಪ್ರತಿಯೊಬ್ಬರು ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿದರೆ ಮಾತ್ರ ಸಮೀಕ್ಷೆಯಲ್ಲಿ ತಮ್ಮನ್ನು ಪರಿಗಣಿಸಲಾಗುವುದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಹೇಳಿದರು.

ಸೆ.22ರಿಂದ ಸಮೀಕ್ಷೆ

ರಾಜ್ಯ ಸರ್ಕಾರ ನಾಳೆಯಿಂದ (ಸೆ.22) ರಾಜ್ಯಾದ್ಯಂತ ಹೊಸದೊಂದು ಸಮೀಕ್ಷೆಗೆ ಚಾಲನೆ ನೀಡಲಿದೆ. ಹಿಂದುಳಿದ ಆಯೋಗ ಮೂಲಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆಗೆ ಸಿದ್ಧತೆ ಆಗಿದ್ದು, ಸೋಮವಾರದಿಂದ ಮನೆಮನೆ ಬಾಗಿಲಿಗೆ ಸಮೀಕ್ಷೆ ಸಿಬ್ಬಂದಿ ಬರಲಿದ್ದಾರೆ.

ಈ ಬಗ್ಗೆ ಹಿಂದುಳಿದ ಆಯೋಗ ಕೂಡ ಈಗಾಗಲೇ ಎಲ್ಲಾ ತಯಾರಿ ಮಾಡಿಕೊಂಡಿದ್ದು, ಇದಕ್ಕಾಗಿ ಶಿಕ್ಷಕರು, ಕಂದಾಯ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಸಮೀಕ್ಷೆಯನ್ನ ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿ ಯಾವ ರೀತಿಯಲ್ಲಿ ಮಾಡಬೇಕು ಎಂಬುದನ್ನು ತರಬೇತಿ ನೀಡಲಾಗಿದೆ.

ಬೆಂಗಳೂರಿನಲ್ಲಿ ತಡ..!

ಬೆಂಗಳೂರಿನಲ್ಲಿ ಎರಡು ಮೂರು ದಿನ ಸಮೀಕ್ಷೆ ತಡವಾಗಿ ಆರಂಭ ಆಗಲಿದೆ. ತರಬೇತಿ ನೀಡುವುದಕ್ಕೆ ಒಂದು ವಾರ ತಡವಾಗಿದೆ. ಜತೆಗೆ, ಜಿಬಿಎ ನೊಟಿಫಿಕೇಷನ್ ತಡ ಆಗಿದ್ದರಿಂದ ಇಲ್ಲಿ ತಡ ಆಗಿದೆ.

ಬೆಂಗಳೂರು ನಗರದಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಿಸಲಾಗಿದೆ.ಬೇರೆ ಇಲಾಖೆಯಿಂದಲೂ ನೇಮಕ ಮಾಡಲಾಗಿದೆ ಎಂದು ಮಧುಸೂದನ್ ಹೇಳಿದರು.

ಯಾವ್ಯಾವ ದಾಖಲೆಗಳು ಇರಬೇಕು?

* ಆಧಾರ್ ಕಾರ್ಡ್

* ರೇಷನ್ ಕಾರ್ಡ್

* ವೋಟರ್ ಐಡಿ ಕಾರ್ಡ್

* ವಿದ್ಯಾಭ್ಯಾಸದ ಅಂಕ ಪಟ್ಟಿ

Leave a Reply

Your email address will not be published. Required fields are marked *

Join WhatsApp Group
error: Content is protected !!