
ಬಂಟ್ವಾಳ, ಅ. 9:ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಗಾಂಜಾ ಸಾಗಾಟ ಪ್ರಕರಣವನ್ನು ಪತ್ತೆಹಚ್ಚಿ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
ಅ. 08ರಂದು ಬೆಳಿಗ್ಗೆ 11.50 ಗಂಟೆಗೆ ಠಾಣೆಯ ಪಿಎಸ್‌ಐ ಸಂದೀಪ್ ಕುಮಾರ ಶೆಟ್ಟಿ ಹಾಗೂ ಸಿಬ್ಬಂದಿಗಳು ಪೆಟ್ರೋಲ್ ಕರ್ತವ್ಯದಲ್ಲಿರುವ ವೇಳೆ ಪಾಣೆಮಂಗಳೂರು ಕಡೆಯಿಂದ ಬಿಸಿರೋಡು ಕಡೆಗೆ ಹೆಲ್ಮೆಟ್ ಇಲ್ಲದೆ ಬರುತ್ತಿದ್ದ ಬೈಕ್ ಸವಾರರನ್ನು ತಡೆದು ವಿಚಾರಣೆ ನಡೆಸಿದರು. ಈ ವೇಳೆ ಬೈಕ್ ಸವಾರ ಅಬ್ದುಲ್ ಮಜೀದ್ ಮತ್ತು ಸಹ ಸವಾರ ಅಬ್ದುಲ್ ಸಾಧಿಕ್ ಇವರುಗಳು ಗಾಂಜಾ ಸಾಗಾಟಕ್ಕೆ ಸಂಬಂಧಿಸಿದ ಮಾಹಿತಿ ಬಿಚ್ಚಿಟ್ಟರು.
ಪೊಲೀಸರ ಹೇಳಿಕೆಯಂತೆ, ಕಳೆದ ಸೆಪ್ಟೆಂಬರ್ 25ರಂದು ಬೊಲೋರೋ ಪಿಕಪ್ ವಾಹನದಲ್ಲಿ ಮಾಧಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ಅಬಕಾರಿ ಇಲಾಖೆಯಿಂದ ತಪ್ಪಿಸಿಕೊಂಡ ಆರೋಪಿಗಳು, ಗಾಂಜಾ ಮಜೀದ್ ಮನೆಯಲ್ಲಿ ಇಟ್ಟು, ಬಳಿಕ ಮಾರಾಟಕ್ಕೆ ಮುಂದಾಗಿದ್ದರು. ಇದರ ಮೊದಲು ಅವರು ಫರಂಗಿಪೇಟೆಯ ಚೋಟಾ ಅಶ್ರಫ್ ಹಾಗೂ ಅಜರುದ್ದೀನ್ ಅವರಿಗೆ ಗಾಂಜಾ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಪೊಲೀಸರು ಆರೋಪಿಗಳಿಂದ 5 ಕಟ್ಟು ಪ್ಲಾಸ್ಟಿಕ್ ಸಹಿತ ಗಾಂಜಾ ಒಟ್ಟು 8.790 ಕಿಲೋ (ಮೌಲ್ಯ ರೂ. 88,700) ವಶಪಡಿಸಿಕೊಂಡಿದ್ದು, ಆರೋಪಿಗಳ ಬೈಕ್ (KA-19-HK-9534) ಸಹ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಆಸ್ತಿಯ ಒಟ್ಟು ಮೌಲ್ಯ ರೂ. 2,17,460 ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ.116/2025, ಕಲಂ 8(c), 20(b)(ii)(B) NDPS ಹಾಗೂ ಸೆ. 3(5) BNS ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.






