
ಪುತ್ತೂರು:ಕರ್ನಾಟಕ ಕ್ರೀಡಾ ಪ್ರಾಧಿಕಾರವು ಕರಾವಳಿಯ ಜನಪದ ಕ್ರೀಡೆಯಾದ ಕಂಬಳ ಕ್ರೀಡೆಗೆ ಅಧಿಕೃತ ಮಾನ್ಯತೆ ನೀಡಿದೆ.
‘ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್’ಗೆ ರಾಜ್ಯ ಕ್ರೀಡಾ ಸಂಸ್ಥೆಯಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ ಎಂದು ಇಲಾಖೆಯ ಆಯುಕ್ತ ಚೇತನ್ ಆರ್. ತಿಳಿಸಿದ್ದಾರೆ.
ಈ ಮಾನ್ಯತೆ ಮೂರು ವರ್ಷಗಳ ಅವಧಿಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ.
ಈ ಮೂಲಕ ಶತಮಾನಗಳಿಂದ ಕರಾವಳಿಯ ಸಂಸ್ಕೃತಿಯ ಭಾಗವಾಗಿರುವ ಕಂಬಳ ಕ್ರೀಡೆಗೆ ರಾಜ್ಯದ ಅಧಿಕೃತ ಮಾನ್ಯತೆ ದೊರೆತಿದೆ.
ದೇವಿಪ್ರಸಾದ್ ಶೆಟ್ಟಿ ಮೊದಲ ಅಧ್ಯಕ್ಷ
ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್‌ನ ಮೊದಲ ಅಧ್ಯಕ್ಷರಾಗಿ ಬೆಳಪು ದೇವಿಪ್ರಸಾದ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಅಸೋಸಿಯೇಷನ್‌ನ ಗೌರವ ಸಲಹೆಗಾರರಾಗಿ ಡಾ. ಜೀವಂಧರ್ ಬಲ್ಲಾಳ್ ಕಾಂತಾವರ, ಜೀವನ್‌ದಾಸ್ ಅಡ್ಯಂತಾಯ ಮಿಯಾರು ಮತ್ತು ಕೆ. ಗುಣಪಾಲ ಕಡಂಬ ಕಾರ್ಕಳರನ್ನು ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ನವೀನ್‌ಚಂದ್ರ ಆಳ್ವ (ತಿರುವೈಲುಗುತ್ತು ವಾಮಂಜೂರು) ಹಾಗೂ ಕಾರ್ಯದರ್ಶಿಯಾಗಿ ವಿಜಯ ಕುಮಾರ್ ಕಂಗಿನಮನೆ (ಕಾರ್ಕಳ) ಆಯ್ಕೆಯಾಗಿದ್ದಾರೆ.
ಎನ್. ಚಂದ್ರಹಾಸ ಶೆಟ್ಟಿ ಕಾರ್ಯಕಾರಿ ಸದಸ್ಯ
ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ಅವರು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ವಿಜಯಾ ಬ್ಯಾಂಕ್‌ನ ನಿವೃತ್ತ ಅಧಿಕಾರಿಯಾದ ಚಂದ್ರಹಾಸ ಶೆಟ್ಟಿ, ಹಲವು ವರ್ಷಗಳಿಂದ ಪುತ್ತೂರಿನಲ್ಲಿ ಕಂಬಳ ಆಯೋಜನೆ, ನಿರ್ವಹಣೆ ಮತ್ತು ಪ್ರಚಾರದಲ್ಲಿ ಪ್ರಮುಖ ಪಾತ್ರವಹಿಸಿದ್ದು, ವಿವಿಧ ಸಂಘ–ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಅವರ ನೇತೃತ್ವದಲ್ಲಿ ಪುತ್ತೂರಿನ ಕಂಬಳಕ್ಕೆ ಹೊಸ ಉತ್ಸಾಹ ಮತ್ತು ಶಿಸ್ತಿನ ನಿಲುವು ದೊರೆತಿದೆ ಎಂದು ಕಂಬಳಾಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.
ಸಮಿತಿಯ ಇತರ ಸದಸ್ಯರು
ಕಾರ್ಯಕಾರಿ ಸಮಿತಿಯಲ್ಲಿ ಚಂದ್ರಹಾಸ ಅನಿಲ್ (ಮೂಡುಬಿದಿರೆ), ಲೋಕೇಶ್ ಶೆಟ್ಟಿ (ಮುಚೂರು), ಭಾಸ್ಕರ್ ಕೋಟ್ಯಾನ್ (ಕಾರ್ಕಳ), ಸುಕುಮಾರ್ ಶೆಟ್ಟಿ (ಕೊಂಡೆಟ್ಟು), ಪಿ.ಆರ್. ಶೆಟ್ಟಿ (ಮಂಗಳೂರು), ರೋಹಿತ್ ಕುಮಾರ್ ಹೆಗ್ಡೆ (ಎರ್ಮಾಳ್), ಶ್ರೀಕಾಂತ್ ಭಟ್ (ಮಣಿಪಾಲ), ಶಾಂತಾರಾಮ ಶೆಟ್ಟಿ (ಬಾರಕೂರು), ಪಿಯೂಸ್ ರೊಡ್ರಿಗಸ್ (ಬಂಟ್ವಾಳ), ಉದಯಕುಮಾರ್ ಶೆಟ್ಟಿ (ಕಾರ್ಕಳ), ಸುಧಾಕರ ಹೆಗ್ಡೆ (ಹೆರಾಜೆ), ಅನಿಲ್ ಶೆಟ್ಟಿ (ಜಪ್ಪಿನಮೊಗರು), ಪ್ರಶಾಂತ್ ಕಾಜವ (ಬಂಟ್ವಾಳ) ಮತ್ತು ಅರುಣ್ ಕುಮಾರ್ ಶೆಟ್ಟಿ (ಬಜಪೆ) ಸೇರಿದಂತೆ ಅನೇಕರು ಸ್ಥಾನ ಪಡೆದಿದ್ದಾರೆ.
ಅಸೋಸಿಯೇಷನ್‌ನ ಜವಾಬ್ದಾರಿಗಳು
ಅಸೋಸಿಯೇಷನ್ ಪ್ರತಿವರ್ಷ ಜೂನ್ 30ರೊಳಗೆ ಆಡಳಿತ ವರದಿ, ಆಡಿಟ್ ವರದಿ, ವಾರ್ಷಿಕ ಸಾಮಾನ್ಯ ಸಭೆ ಮತ್ತು ಕಾರ್ಯಕಾರಿ ಸಭೆಗಳ ನಡಾವಳಿ ಪ್ರತಿ, ಕಾರ್ಯಕ್ರಮ ಕ್ಯಾಲೆಂಡರ್ ಹಾಗೂ ಸಂಘಗಳ ನೋಂದಣಿ ಕಾಯಿದೆ 1960ರಡಿ ನವೀಕರಣ ಪ್ರತಿಯನ್ನು ಸಲ್ಲಿಸಬೇಕಾಗಿದೆ.
ಅಸೋಸಿಯೇಷನ್‌ಗೆ ನೀಡುವ ಅನುದಾನವು ಸರಕಾರದ ವಿಶೇಷ ಅನುದಾನ ಸಂಹಿತೆ ನಿಯಮಗಳಿಗೆ ಒಳಪಟ್ಟಿದ್ದು, ಕ್ರೀಡಾ ಪ್ರಾಧಿಕಾರ ಮತ್ತು ಯುವ ಸಬಲೀಕರಣ ಇಲಾಖೆಯ ನಿಯಮಗಳು ಹಾಗೂ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.






