
ಪುತ್ತೂರು: ಅಕ್ಟೋಬರ್ 20, ಸೋಮವಾರದಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಅಶೋಕ ಜನಮನ ದೀಪಾವಳಿ ವಸ್ತ್ರ ವಿತರಣಾ ಕಾರ್ಯಕ್ರಮ ಜನಸ್ತೋಮದಿಂದ ಕಂಗೊಳಿಸಿತು. ಆದರೆ, ಅಪಾರ ಜನಸಂದಣಿಯಿಂದ ಕೆಲವರು ಅಸ್ವಸ್ಥರಾದ ಘಟನೆ ಸಂಭವಿಸಿದೆ.
ಈ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ರೈ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. “ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಜನರು ಆಗಮಿಸಿದ್ದರು. ಮಧ್ಯಾಹ್ನದ ವೇಳೆಯಲ್ಲಿ ಗಾಳಿ ಮಳೆ ಬಂದ ಪರಿಣಾಮ ಜನರ ಮಧ್ಯೆ ಗೊಂದಲ ಉಂಟಾಗಿ 7-8 ಮಂದಿ ಅಸ್ವಸ್ಥರಾದರು. ಅವರಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ,” ಎಂದು ಶಾಸಕರು ತಿಳಿಸಿದ್ದಾರೆ.
“ಸಾಕಷ್ಟು ವ್ಯವಸ್ಥೆ ಮಾಡಿದರೂ ಜನಸಂದಣಿ ಹೆಚ್ಚಾದ ಕಾರಣ ಸ್ವಲ್ಪ ಅಸೌಕರ್ಯ ಉಂಟಾಯಿತು. ಕೆಲವರ ಮನಸ್ಸಿಗೆ ನೋವಾದಿದ್ದರೆ ನಾನು ಹೃತ್ಪೂರ್ವಕ ಕ್ಷಮೆ ಯಾಚಿಸುತ್ತೇನೆ. ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು,” ಎಂದು ಅವರು ತಿಳಿಸಿದ್ದಾರೆ.
ಸಂಜೆದಿಂದ ರಾತ್ರಿ 9.30ರ ತನಕ ಉಡುಗೊರೆ ವಿತರಣೆ ಕಾರ್ಯಕ್ರಮ ನಡೆದಿದ್ದು, ಸ್ಥಳೀಯರು ಹಾಗೂ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡರು.
— ಶಾಸಕ ಅಶೋಕ್ ರೈ, ಪುತ್ತೂರು






