ಮಂಗಳೂರು: ಕರ್ತವ್ಯ ನಿರ್ವಹಣೆಯ ವೇಳೆ ಪ್ರಾಣ ತ್ಯಾಗ ಮಾಡಿದ ಪೊಲೀಸರ ಸ್ಮರಣಾರ್ಥ ಪ್ರತಿ ವರ್ಷ ಅಕ್ಟೋಬರ್ 21ರಂದು ಆಚರಿಸಲಾಗುವ ಪೊಲೀಸ್ ಹುತಾತ್ಮರ ದಿನಾಚರಣೆ ಮಂಗಳೂರು ನಗರ ಪೊಲೀಸ್ ಕಛೇರಿ ಆವರಣದಲ್ಲಿ ಭಾವಪೂರ್ಣವಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ಬಸವರಾಜ್ ಉಪಸ್ಥಿತರಿದ್ದರು. ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕ ಶ್ರೀ ಅಮಿತ್ ಸಿಂಗ್, ಮಂಗಳೂರು ನಗರ ಪೊಲೀಸ್ ಆಯುಕ್ತ ಶ್ರೀ ಸುಧೀರ್ ಕುಮಾರ್ ರೆಡ್ಡಿ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಹಾಗೂ ಅರಣ್ಯ ಇಲಾಖೆಯ ಸಿಸಿಎಫ್ ಶ್ರೀ ಕರಿಕಾಲನ್ ರವರು ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಬಸವರಾಜ್ ಅವರು, “ಪೊಲೀಸರು ದಿನದ 24 ಗಂಟೆಯೂ ಸಮಾಜದ ಸುರಕ್ಷತೆಗೆ ನಿಂತಿರುವ ಸೇವಾಧಾರರು. 2001ರ ಸಂಸತ್ ದಾಳಿ, 2008ರ ತಾಜ್ ಹೊಟೇಲ್ ದಾಳಿ ಸಂದರ್ಭದಲ್ಲಿಯೂ ಪೊಲೀಸರು ತಮ್ಮ ಕರ್ತವ್ಯಕ್ಕೆ ಜೀವದ ಹಂಗು ತೊರೆದು ನಿಂತಿದ್ದರು. ಕೊರೊನಾ ಮಹಾಮಾರಿಯ ವೇಳೆಯಲ್ಲೂ ಪೊಲೀಸರು ಅಪಾರ ಧೈರ್ಯದಿಂದ ಸೇವೆ ಸಲ್ಲಿಸಿದರು,” ಎಂದು ಪ್ರಶಂಸಿಸಿದರು.

2024ರ ಸೆಪ್ಟೆಂಬರ್ 1ರಿಂದ 2025ರ ಆಗಸ್ಟ್ 31ರವರೆಗೆ ದೇಶಾದ್ಯಂತ ಒಟ್ಟು 191 ಮಂದಿ ಪೊಲೀಸರು ಹುತಾತ್ಮರಾಗಿದ್ದು, ಅವರಲ್ಲಿ ಕರ್ನಾಟಕ ರಾಜ್ಯದ 8 ಮಂದಿ ಸೇರಿದ್ದಾರೆ. ಅವರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಗೌರವ ವಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ, ಕಿರಿಯ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳು, ಸಾರ್ವಜನಿಕರು ಮತ್ತು ವಿವಿಧ ಸರ್ಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!