
ಪುತ್ತೂರು: ಕಳೆದ ನಾಲ್ಕು ದಶಕಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಅಹರ್ನಿಶಿ ಸೇವೆ ಸಲ್ಲಿಸುತ್ತಿರುವ ಪುತ್ತೂರಿನ ಚೇತನಾ ಆಸ್ಪತ್ರೆಯ ಒಳರೋಗ ತಜ್ಞರಾದ ಡಾ. ಜೆ.ಸಿ. ಅಡಿಗ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ನೀಡಿದ ಅಮೂಲ್ಯ ಸೇವೆಯನ್ನು ಪರಿಗಣಿಸಿ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಉಡುಪಿ ಜಿಲ್ಲೆಯ ಮೂಲದ ಡಾ. ಅಡಿಗ ಅವರು ಪ್ರಾಥಮಿಕ ಶಿಕ್ಷಣವನ್ನು ಉಡುಪಿಯಲ್ಲೇ ಪೂರ್ಣಗೊಳಿಸಿ, 1983ರಲ್ಲಿ ಮೈಸೂರು ಮೆಡಿಕಲ್ ಕಾಲೇಜಿನಿಂದ ಎಂ.ಬಿ.ಬಿ.ಎಸ್ ಮತ್ತು ಎಂ.ಡಿ ಪದವಿಗಳನ್ನು ಪಡೆದರು. ಬಳಿಕ ಎರಡು ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿ, 1984ರಿಂದ ಪುತ್ತೂರಿನ ಚೇತನಾ ಆಸ್ಪತ್ರೆಯಲ್ಲಿ ಒಳರೋಗ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡಾ. ಅಡಿಗ ಅವರು ಐಎಂಎ (IMA), ಎಪಿಐ ನ್ಯಾಷನಲ್ ಚಾಪ್ಟರ್ (API National Chapter), ಆರ್‌ಎಸ್‌ಎಸ್‌ಡಿಐ (RSSDI) ಹಾಗೂ ಹೈಪರ್‌ಟೆನ್ಶನ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಗಳ ಜೀವಿತ ಸದಸ್ಯರಾಗಿದ್ದಾರೆ.
ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದು, Monkey Fever ಕುರಿತ ಸಂಶೋಧನಾ ಪ್ರಬಂಧ ಮಂಡಿಸಿದ್ದು, ಹೆಪಟಿಕ್ ಅಮೀಬಿಯಾಸಿಸ್ (Tinidazole Trial), ಹ್ಯೂಮಾಪೆನ್ ಟ್ರಯಲ್ (Humapen Trial in Puttur) ಮತ್ತು ಟೈಪ್ ಎ ಹೆಪಟೈಟಿಸ್ ಕ್ಲಿನಿಕಲ್ ಸ್ಟಡಿಗಳಲ್ಲಿ ಭಾಗಿಯಾಗಿದ್ದಾರೆ.
ಅವರು ADA, EASD ಸೇರಿದಂತೆ ಅನೇಕ ಅಂತರಾಷ್ಟ್ರೀಯ ವೈದ್ಯಕೀಯ ಸಮ್ಮೇಳನಗಳಲ್ಲಿ ಹಾಗೂ ದೇಶೀಯ ಮಟ್ಟದ ಮಧುಮೇಹ, ಹೃದ್ರೋಗ ಮತ್ತು ಒಳರೋಗ ತಜ್ಞರ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ.
ತಮ್ಮ ನಾಲ್ಕು ದಶಕಗಳ ವೈದ್ಯಕೀಯ ಸೇವೆಯಲ್ಲಿ ಡಾ. ಅಡಿಗ ಅವರು 5000ಕ್ಕೂ ಹೆಚ್ಚು ಹೃದಯಾಘಾತ ರೋಗಿಗಳಿಗೆ ಚಿಕಿತ್ಸೆ ನೀಡಿ, 10,000ಕ್ಕೂ ಅಧಿಕ ಗ್ರಾಮೀಣ ವೈದ್ಯಕೀಯ ಶಿಬಿರಗಳನ್ನು ಸುಳ್ಯ, ಪುತ್ತೂರು ಮತ್ತು ಬಂಟ್ವಾಳ ತಾಲೂಕುಗಳಲ್ಲಿ ಆಯೋಜಿಸಿದ್ದಾರೆ.
1984ರಲ್ಲಿ ಬೆಳ್ತಂಗಡಿ ತಾಲೂಕಿನ Monkey Fever ಸ್ಫೋಟದ ಸಂದರ್ಭದಲ್ಲಿ ಸರ್ಕಾರದ ಸೇವೆಯಲ್ಲಿ ಇದ್ದ ಅವರು, ಅಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಅತ್ಯಂತ ಮಹತ್ವದ ಸೇವೆ ಸಲ್ಲಿಸಿದ್ದರು.
ಡಾ. ಅಡಿಗ ಅವರ ಪತ್ನಿ ಶೋಭಾ ಹಾಗೂ ಪುತ್ರಿ ಮೇಧಾ ಸುಖೀ ಜೀವನ ನಡೆಸುತ್ತಿದ್ದಾರೆ.






