ಮಂಗಳೂರು, ನ.7: ಕಂಬಳ ಸಂಘಟಕ, ತಿರುವೈಲುಗುತ್ತು ನವೀನ್‌ಚಂದ್ರ ಆಳ್ವ ಅವರ ಪುತ್ರ ಹಾಗೂ ಹೊಟೇಲ್‌ ಉದ್ಯಮಿ ಅಭಿಷೇಕ್‌ ಆಳ್ವ (29) ಅವರು ಹೆಜಮಾಡಿ ಸಮೀಪದ ಶಾಂಭವಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಶುಕ್ರವಾರ ಬೆಳಗ್ಗೆ ನದಿ ಮಧ್ಯದ ಕುದ್ರು ಬಳಿ ಅವರ ಮೃತದೇಹ ಪತ್ತೆಯಾಗಿದೆ.

ನೆಲ್ಯಾಡಿಯಲ್ಲಿ ತಂದೆಯ “ಚರಣ್ ಬಾರ್ ಅಂಡ್ ರೆಸ್ಟೋರೆಂಟ್” ಉದ್ಯಮವನ್ನು ನೋಡಿಕೊಳ್ಳುತ್ತಿದ್ದ ಅಭಿಷೇಕ್, ಬುಧವಾರ ರಾತ್ರಿ ಸ್ನೇಹಿತರೊಂದಿಗೆ ಊಟ ಮುಗಿಸಿ ತಮ್ಮ ಕಾರಿನಲ್ಲಿ ತೆರಳಿದ್ದರು. ಬಳಿಕ ಅವರು ನಾಪತ್ತೆಯಾಗಿದ್ದು, ಗುರುವಾರ ಸಂಜೆ ಮೂಲ್ಕಿ ಬಪ್ಪನಾಡು ಸೇತುವೆ ಬಳಿ ಅವರ ಕಾರು ಪತ್ತೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಪುತ್ರ ನಾಪತ್ತೆಯಾದ ಕುರಿತು ನವೀನ್‌ಚಂದ್ರ ಆಳ್ವ ಅವರು ಪಡುಬಿದ್ರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಸ್ಥಳೀಯರು ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದಲ್ಲಿ ಶಾಂಭವಿ ನದಿಯಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು.

ಶುಕ್ರವಾರ ಬೆಳಗ್ಗೆ ನದಿ ಮಧ್ಯದ ಕುದ್ರು ಬಳಿ ಶವ ಪತ್ತೆಯಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಕುರಿತು ಪಡುಬಿದ್ರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!