
ಪುತ್ತೂರು: ಕೆಯ್ಯೂರು ಗ್ರಾಮದ ಪೊಯೊಳೆ ನಿವಾಸಿ ಸುಮತಿ ಅವರ ಪುತ್ರಿ ನೀತಾ (22) ಎಂಬವರು ಮನೆಯೊಳಗೆ ಕಿಟಕಿಯ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನವೆಂಬರ್ 23ರಂದು ಸಂಭವಿಸಿರುವುದಾಗಿ ವರದಿಯಾಗಿದೆ.
ಈ ಕುರಿತು ಮೃತಳ ಅಕ್ಕ ಗೀತಾ ಅವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ವಿವರದಂತೆ, ನೀತಾರ ತಂದೆ ಗುಡ್ಡಪ್ಪ ರೈ ಅವರು ಸುಮಾರು 20 ವರ್ಷಗಳ ಹಿಂದೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮನೆಯಿಂದ ದೂರವಾಗಿದ್ದು, ಪ್ರಸ್ತುತ ತಾಯಿ ಹಾಗೂ ಇಬ್ಬರು ಪುತ್ರಿಯರು ಮಾತ್ರ ಮನೆಯಲ್ಲಿ ವಾಸವಿದ್ದರು.
ನವೆಂಬರ್ 23ರಂದು ಬೆಳಿಗ್ಗೆ ಗೀತಾ ಅವರು ಕೆಲಸ ಹಾಗೂ ತಂಗಿಗೆ ಔಷಧಿ ತರಲು ಮಂಗಳೂರಿಗೆ ತೆರಳಿದ್ದು, ಮನೆಯ ಮುಂಭಾಗದ ಬಾಗಿಲಿಗೆ ಬೀಗ ಹಾಕಿದ್ದರೆಂದು ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ ಬಿಸಿ ರೋಡ್ ತಲುಪಿದ ಸಂದರ್ಭ ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಅವರು ಕರೆ ಮಾಡಿ, ನೀತಾ ಮನೆ ಒಳಗಿನಿಂದ ಹಿಂಬಾಗಿಲಿನ ಚಿಲಕ ಹಾಕಿಕೊಂಡಿದ್ದು, ಕರೆದರೂ ಬಾಗಿಲು ತೆಗೆಯುತ್ತಿಲ್ಲ ಎಂದು ತಾಯಿ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.
ಸಂಜೆ ಸುಮಾರು 6.30ರ ವೇಳೆಗೆ ಗೀತಾ ಮನೆಗೆ ಮರಳಿ, ಮುಂಭಾಗದ ಬಾಗಿಲಿನ ಬೀಗ ತೆರೆದು ಒಳ ಪ್ರವೇಶಿಸಿದ್ದಾರೆ. ಈ ವೇಳೆ ನೀತಾಳು ಮಲಗುವ ಕೋಣೆಯಲ್ಲಿ ಶಾಲಿನ ಒಂದು ತುದಿಯನ್ನು ಕಿಟಕಿಯ ಸರಳಿಗೆ ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಅದೇ ಸಮಯದಲ್ಲಿ ಹೊರಗೆ ಹೋಗಿದ್ದ ತಾಯಿ ಕೂಡ ಮನೆಗೆ ಬಂದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ನೀತಾ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, 2016ರ ನಂತರ ತಲೆನೋವಿನಿಂದ ಬಳಲುತ್ತಿದ್ದರು. 2020ರ ಬಳಿಕ ಕುತ್ತಿಗೆ, ಬೆನ್ನುಹುರಿ ಹಾಗೂ ತಲೆಯ ನರ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಎಂಸಿ ಮಂಗಳೂರು, ಎಜೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಇತ್ತೀಚೆಗೆ ಕೆಎಂಸಿ ಮಣಿಪಾಲ ಹಾಗೂ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆ, ಉದ್ಯಾವರದಲ್ಲಿ ಕಳೆದ 9 ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಕೆಲವು ದಿನಗಳಿಂದ ಸ್ವಲ್ಪ ಸುಧಾರಣೆ ಕಂಡು ಬಂದಿತ್ತು ಎಂಬುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಅನಾರೋಗ್ಯದಿಂದ ಮಾನಸಿಕವಾಗಿ ಮನನೊಂದು, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಸಂಪ್ಯ ಪೊಲೀಸರು ಯುಡಿಆರ್ ಸಂಖ್ಯೆ 42/2025 ಅಡಿಯಲ್ಲಿ ಬಿಎನ್‌ಎಸ್‌ಎಸ್ ಕಲಂ 194ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸೂಚನೆ: ಆತ್ಮಹತ್ಯೆ ಆಲೋಚನೆಗಳು ಯಾರಿಗಾದರೂ ಬಂದರೆ ತಕ್ಷಣ ಸಹಾಯ ಪಡೆಯುವುದು ಅತ್ಯಂತ ಅಗತ್ಯ.
ಭಾರತದಲ್ಲಿ ಉಚಿತ ಸಹಾಯವಾಣಿ: ಕಿರಣ ಹೆಲ್ಪ್‌ಲೈನ್ – 1800-599-0019 (24×7).
ಹತ್ತಿರದ ಆಸ್ಪತ್ರೆ ಅಥವಾ ವಿಶ್ವಾಸಾರ್ಹ ವ್ಯಕ್ತಿಯನ್ನು ಸಂಪರ್ಕಿಸುವುದು ಸಹ ಮುಖ್ಯವಾಗಿದೆ.






