
ಪುತ್ತೂರು: ಪುತ್ತೂರಿನ ದೀರ್ಘಕಾಲದ ಬೇಡಿಕೆಗಳಲ್ಲಿ ಒಂದಾದ ಹೊಸ ತಾಲೂಕು ಪಂಚಾಯತ್ ಕಟ್ಟಡ ನಿರ್ಮಾಣ ಕಾರ್ಯಕ್ಕೆ ನಾಳೆ ಚಾಲನೆ ಸಿಗುತ್ತಿದೆ. ಹಳೆಯ, ಸೌಲಭ್ಯ ಕೊರತೆಯಿದ್ದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಾಪಂ ಕಚೇರಿಗೆ ಆಧುನಿಕ ಸೌಕರ್ಯಗಳಿರುವ ನೂತನ ಕಟ್ಟಡ ಅಗತ್ಯವಿದೆ ಎಂದು ಶಾಸಕರಾಗಿದ್ದ ಆರಂಭಿಕ ದಿನಗಳಿಂದಲೇ ಅಶೋಕ್ ರೈ ಒತ್ತಾಯಿಸಿದ್ದರು. ಇದೀಗ ಆ ಕನಸು ಸಾಕಾರಗೊಳ್ಳುತ್ತಿದೆ.
ಸುಮಾರು 5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ತಾಪಂ ಕಟ್ಟಡಕ್ಕೆ ನಾಳೆ ಬೆಳಿಗ್ಗೆ 11.30ಕ್ಕೆ ಶಾಸಕರಾದ ಅಶೋಕ್ ರೈ ಶಿಲಾನ್ಯಾಸ ನೆರವೇರಿಸಲಿದ್ದಾರೆ. ದರ್ಬೆ–ಪರ್ಲಡ್ಕ ರಸ್ತೆಯಲ್ಲಿರುವ ಕೃಷಿ ಇಲಾಖೆಯ ಕಚೇರಿ ಸಮೀಪ ಕಟ್ಟಡವನ್ನು ನಿರ್ಮಿಸಲು ಸ್ಥಳ ಗುರುತಿಸಲಾಗಿದೆ.
ಹಿಂದೆ ಪುತ್ತೂರಿನ ತಾಪಂ ಕಟ್ಟಡಕ್ಕಾಗಿ ಅನುದಾನ ಬಿಡುಗಡೆಯಾದರೂ, ಸ್ಥಳೀಯ ಇಚ್ಚಾಶಕ್ತಿಯ ಕೊರತೆಯಿಂದ ಆ ಅನುದಾನ ಕಡಬಕ್ಕೆ ವರ್ಗಾವಣೆಯಾಗಿತ್ತು. ಮಿನಿ ವಿಧಾನಸೌಧ ಉದ್ಘಾಟನೆಯ ಬಳಿಕ ತಾಪಂ ಕಚೇರಿಯಿರುವ ಹಳೆಯ ಕಟ್ಟಡವು ಕಮರ್ಷಿಯಲ್ ಕಾಂಪ್ಲೆಕ್ಸ್‌ನಂತೆ ಕಾಣಿಸಿಕೊಳ್ಳುತ್ತಿದ್ದು, ಹೊಸ ಕಟ್ಟಡದ ಅವಶ್ಯಕತೆ ಹೆಚ್ಚು ಸ್ಪಷ್ಟವಾಗಿತ್ತು.
ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್‌ಗಳ ಸಹಯೋಗದಲ್ಲಿ ಕಟ್ಟಡ ನಿರ್ಮಾಣ ಕೈಗೊಳ್ಳಲಾಗುತ್ತಿದೆ. ಪಂಚಾಯತ್ ಇಲಾಖೆಯೊಂದಿಗೆ ನಿರಂತರ ಸಂವಹನ ಹಾಗೂ ಒತ್ತಡದಿಂದಾಗಿ 5 ಕೋಟಿ ರೂ ಅನುದಾನ ಪಡೆಯಲು ಶಾಸಕರು ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಹೊಸ ಕಟ್ಟಡವು ಆಧುನಿಕ ವಿನ್ಯಾಸ, ಸೂಕ್ತ ಸೌಕರ್ಯಗಳೊಂದಿಗೆ ನಿರ್ಮಾಣವಾಗಲಿದೆ.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಗ್ರಾಪಂ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.






