
ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು ನಗರದಲ್ಲಿ ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಕ್ರಿಯರಾಗಿರುವ ನೂತನ ಪೊಲೀಸ್ ಅಧೀಕ್ಷಕರು (SP) ಹಾಗೂ ಪೊಲೀಸ್ ಕಮಿಷನರ್ ಅವರನ್ನು ವರ್ಗಾವಣೆ ಮಾಡಲು ನಡೆಯುತ್ತಿರುವ ರಾಜಕೀಯ ತೆರೆಮರೆಯ ಪ್ರಯತ್ನಗಳನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ತೀವ್ರವಾಗಿ ಖಂಡಿಸಿದ್ದಾರೆ.
ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಕದಡುವ ಶಕ್ತಿಗಳನ್ನು ಹತ್ತಿಕ್ಕುವಲ್ಲಿ ಈ ಅಧಿಕಾರಿಗಳು ಪ್ರಶಂಸನೀಯ ಕೆಲಸ ಮಾಡಿದ್ದಾರೆ. ಸುದೀರ್ಘ ಕಾಲದ ನಂತರ ಮಂಗಳೂರಿನ ಜನತೆ ಅಲ್ಪಸ್ವಲ್ಪ ಶಾಂತಿಯುತ ವಾತಾವರಣವನ್ನು ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅಡ್ಡಿಯಾಗಿರುವ ಈ ಅಧಿಕಾರಿಗಳನ್ನು ಎತ್ತಂಗಡಿ ಮಾಡಲು ಕೆಲವು ರಾಜಕೀಯ ಶಕ್ತಿಗಳು ಪಿತೂರಿ ನಡೆಸುತ್ತಿರುವುದು ಅತ್ಯಂತ ದುರದೃಷ್ಟಕರ.
ಹೋರಾಟದ ನಡುವೆಯೂ ವರ್ಗಾವಣೆಗೆ ವಿರೋಧ:
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅನ್ವರ್ ಸಾದತ್, “ರಹ್ಮಾನ್ ಕೊಳತ್ತಮಜಲು ಪ್ರಕರಣದ ಆರೋಪಿಗಳ ಮೇಲೆ ಕೋಕಾ (KOCA) ಕಾಯಿದೆ ಹೇರುವಲ್ಲಿನ ವೈಫಲ್ಯ ಹಾಗೂ ಸೌಜನ್ಯ ಪ್ರಕರಣದ ತನಿಖಾ ಲೋಪಗಳ ವಿರುದ್ಧ ನಾವು ಈ ಹಿಂದೆಯೇ ಬೃಹತ್ ಪ್ರತಿಭಟನೆ ನಡೆಸಿದ್ದೇವೆ. ಈ ಹೋರಾಟದ ಹಿನ್ನೆಲೆಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರ ಮೇಲೆ ಪೊಲೀಸ್ ಪ್ರಕರಣಗಳು ದಾಖಲಾಗಿವೆ. ನ್ಯಾಯಕ್ಕಾಗಿ ನಮ್ಮ ಹೋರಾಟ ಮತ್ತು ಕಾನೂನು ಹೋರಾಟಗಳು ಮುಂದೆಯೂ ಮುಂದುವರಿಯಲಿವೆ. ಹಾಗೂ ಇಲಾಖೆಯ ತಪ್ಪುಗಳನ್ನು ಪ್ರಶ್ನಿಸುವುದು ನಮ್ಮ ಹಕ್ಕಾಗಿರುತ್ತದೆ. ಈ ಇಬ್ಬರು ಅಧಿಕಾರಿಗಳು ಅಧಿಕಾರ ವಹಿಸಿಕೊಂಡ ನಂತರ ದಕ್ಷಿಣ ಕನ್ನಡ ಜಿಲ್ಲೆ ಶಾಂತಿಯಲ್ಲಿ ಈ ಹಿಂದೆಗಿಂತ ಎಷ್ಟೋ ಉತ್ತಮವಾಗಿದೆ ಎಂಬುದನ್ನು ನಾವು ಒಪ್ಪುತ್ತೇವೆ.
ಆದರೆ ಸೀಮಿತ ಪ್ರಕರಣದಲ್ಲಿನ ವೈಫಲ್ಯವನ್ನು ಮುಂದಿಟ್ಟುಕೊಂಡು ಅವರ ವರ್ಗಾವಣೆಗೆ ಎಸ್‌ಡಿಪಿಐ ಬೆಂಬಲಿಸುವುದಿಲ್ಲ. ರಾಜಕೀಯ ಲಾಭಕ್ಕಾಗಿ ಅಥವಾ ಪಟ್ಟಭದ್ರ ಹಿತಾಸಕ್ತಿಗಳ ತೃಪ್ತಿಗಾಗಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ನ್ಯಾಯಸಮ್ಮತವಲ್ಲ,” ಎಂದು ಸ್ಪಷ್ಟಪಡಿಸಿದರು.
*ಎಸ್‌ಡಿಪಿಐ ಆಗ್ರಹಗಳು:*
*ರಾಜಕೀಯ ಹಸ್ತಕ್ಷೇಪ ನಿಲ್ಲಲಿ:* ಅಧಿಕಾರಿಗಳು ರಾಜಕೀಯ ನಾಯಕರ ಕೈಗೊಂಬೆಗಳಾಗಬಾರದು. ರಾಜಕೀಯ ಒತ್ತಡ ಹೇರಿ ಅಧಿಕಾರಿಗಳನ್ನು ವರ್ಗಾಯಿಸುವುದು ಹಾಗೂ ತಮ್ಮ ತಾಳಕ್ಕೆ ಕುಣಿಯುವ ಅಧಿಕಾರಿಗಳನ್ನು ತರಲು ಪ್ರಯತ್ನಿಸುವುದು ಜಿಲ್ಲೆಯ ಭವಿಷ್ಯಕ್ಕೆ ಮಾರಕ.
*ಅವಧಿಗೆ ಮುನ್ನ ವರ್ಗಾವಣೆ ಸಲ್ಲದು:* ಜಿಲ್ಲೆಯ ಶಾಂತಿಯನ್ನು ಕಾಪಾಡುತ್ತಿರುವ ಅಧಿಕಾರಿಗಳನ್ನು ಅವರ ನಿಗದಿತ ಅವಧಿ ಮುಗಿಯುವ ಮೊದಲೇ ವರ್ಗಾವಣೆ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬಾರದು.
*ಪಾರದರ್ಶಕ ತನಿಖೆಗೆ ಆಗ್ರಹ:* ಕೋಕಾ ಕಾಯಿದೆ ಹೇರುವಲ್ಲಿನ ವೈಫಲ್ಯ ಹಾಗೂ ಸೌಜನ್ಯ ಪ್ರಕರಣದಂತಹ ವಿಷಯಗಳಲ್ಲಿ ಅಧಿಕಾರಿಗಳು ಕೂಡಲೇ ಪಾರದರ್ಶಕವಾಗಿ ಕಾರ್ಯನಿರ್ವಹಿಸಿ ಜನರಿಗೆ ನ್ಯಾಯ ಒದಗಿಸಬೇಕು.
*ಬೃಹತ್ ಪ್ರತಿಭಟನೆಯ ಎಚ್ಚರಿಕೆ:*
ಒಂದು ವೇಳೆ ರಾಜಕೀಯ ಒತ್ತಡಕ್ಕೆ ಮಣಿದು ಈ ಇಬ್ಬರು ಅಧಿಕಾರಿಗಳ ವರ್ಗಾವಣೆಯಾದರೆ ಜಿಲ್ಲೆಯಾದ್ಯಂತ ಎಸ್‌ಡಿಪಿಐ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
ಸರ್ಕಾರವು ದಕ್ಷ ಅಧಿಕಾರಿಗಳ ಬೆನ್ನಿಗೆ ನಿಲ್ಲಬೇಕೇ ಹೊರತು, ಸ್ವಾರ್ಥ ರಾಜಕಾರಣಿಗಳ ಪಿತೂರಿಗೆ ಅವಕಾಶ ನೀಡಬಾರದು ಎಂದು ಅವರು ಪತ್ರಿಕಾ ಪ್ರಕಟಣೆಯ ಮೂಲಕ ಎಚ್ಚರಿಸಿದ್ದಾರೆ.






