ಮಂಜೇಶ್ವರ ತಾಲೂಕಿನ ಕುಂಜತ್ತೂರು ತೂಮಿನಾಡುವಿನ ಹಿಲ್‌ಟಾಪ್ ಪ್ರದೇಶದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ನಡೆದ ಕುಟುಂಬ ಕಲಹದಲ್ಲಿ ಮೃತರ ಸಂಖ್ಯೆ ಇಬ್ಬರಿಗೆ ಏರಿಕೆಯಾಗಿದೆ.
ಆಸ್ತಿ ಕಲಹದ ಹಿನ್ನೆಲೆಯಲ್ಲಿ ಉಮರ್ ಪಾಷ ನಡೆಸಿದ ಬರ್ಬರ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶೇಕುಂಞಿ ಮಂಗಳವಾರ ಬೆಳಿಗ್ಗೆ ಚಿಕಿತ್ಸೆ ಫಲಿಸದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸೋಮವಾರ ಸಂಜೆ ನಡೆದ ಘಟನೆಯಲ್ಲಿ ಆರೋಪಿ ಉಮರ್ ಪಾಷ ತನ್ನ 18 ವರ್ಷದ ಮಗಳು ಮರಿಯಮತ್ ಜುಮೈರಾಳನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದನು. ಮಗಳ ಕಿರುಚಾಟ ಕೇಳಿ ಆಕೆಯನ್ನು ರಕ್ಷಿಸಲು ಧಾವಿಸಿದ್ದ ಶೇಕುಂಞಿ ಅವರ ಮೇಲೂ ಆರೋಪಿ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ.
ತೀವ್ರ ರಕ್ತಸ್ರಾವದಿಂದ ಗಂಭೀರ ಸ್ಥಿತಿಗೆ ತಲುಪಿದ್ದ ಶೇಕುಂಞಿ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಕಳೆದ ಮೂರು ತಿಂಗಳ ಹಿಂದಷ್ಟೇ ವಿದೇಶದಿಂದ ಊರಿಗೆ ಮರಳಿದ್ದ ಉಮರ್ ಪಾಷ, ಆಸ್ತಿ ವಿಚಾರವಾಗಿ ಕುಟುಂಬದ ಸದಸ್ಯರೊಂದಿಗೆ ಪದೇಪದೇ ಜಗಳವಾಡುತ್ತಿದ್ದ ಎನ್ನಲಾಗಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ














