
ಕಾಸರಗೋಡು: ಚಿನ್ನಾಭರಣ ಕಳವು ಆರೋಪದ ಹಿನ್ನೆಲೆ ಮಾನಸಿಕವಾಗಿ ನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಆದೂರು ಸಮೀಪದ ನೆಲ್ಲಡ್ಕದಲ್ಲಿ ನಡೆದಿದೆ.
ನೆಲ್ಲಡ್ಕ ನಿವಾಸಿ ಜಸೀಲಾ (24) ಮೃತರು. ಎರಡು ಮಕ್ಕಳ ತಾಯಿಯಾಗಿದ್ದ ಜಸೀಲಾ, ನೆರೆಮನೆಯ ಯುವಕ ಹಾಗೂ ಆತನ ಕುಟುಂಬಸ್ಥರು ತಮ್ಮ ವಿರುದ್ಧ ಚಿನ್ನಾಭರಣ ಕಳವು ಆರೋಪ ಹೊರಿಸಿ ಪೊಲೀಸ್ ದೂರು ನೀಡಿದ್ದರಿಂದ ಮನನೊಂದಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ಸಂಬಂಧ ಜಸೀಲಾರನ್ನು ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದರು. ಆದರೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ಸಾಕ್ಷ್ಯಗಳು ಲಭಿಸದ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ವಿಚಾರಣೆ ಸಂದರ್ಭದಲ್ಲಿ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಜಸೀಲಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿಯೂ ಅಪಪ್ರಚಾರ ನಡೆದಿದ್ದು, ಇದರಿಂದ ಅವರು ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ. ಕಳೆದ ರವಿವಾರ ತಾವು ಅಮಾಯಕಿ ಎಂದು ಹೇಳಿಕೊಂಡು ವಿಡಿಯೋ ಚಿತ್ರೀಕರಿಸಿದ ಬಳಿಕ ವಿಷ ಸೇವಿಸಿದ್ದರೆಂದು ತಿಳಿದುಬಂದಿದೆ.
ಗಂಭೀರ ಸ್ಥಿತಿಯಲ್ಲಿ ಅವರನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾರೆ.
ಅದೂರು ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.







