
ಹಾಸನ :ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಹಂಪ್ಗಳಿಗೆ ಬಲಿ ಮುಂದುವರಿದಿದೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ಅಪಘಾತ ನಡೆದು ಯುವಕ ಮೃತಪಟ್ಟಿದ್ದ ಘಟನೆ ಮಾಸುವ ಮುನ್ನವೇ ಹಾಸನದಲ್ಲಿಯೂ ಯುವತಿಯೋರ್ವಳು ಪ್ರಾಣ ಕಳೆದುಕೊಂಡಿದ್ದಾಳೆ.
ದಾರಿಯಲ್ಲಿದ್ದ ಹಂಪ್ಸ್ ಕಾಣದ ಪರಿಣಾಮ ದ್ವಿಚಕ್ರ ವಾಹನ ರಸ್ತೆಗೆ ಉರುಳಿ ಪ್ರಿಯಾ (23) ಸ್ಥಳದಲ್ಲೇ ಮೃತಪಟ್ಟಿದ್ದರೆ, ಸ್ವಾತಿ(24) ಸ್ಥಿತಿ ಗಂಭೀರವಾಗಿದೆ. ಹಾಸನ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಘಟನೆ, ನಡೆದಿದ್ದು, ಗಾಯಾಳು ಸ್ವಾತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಸ್ಪೀಡ್ ಬ್ರೇಕರ್ಗಳನ್ನು ಹಾಕಲಾಗಿದ್ದು, ಈ ಬಗ್ಗೆ ಕನಿಷ್ಠ ಸೂಚನಾ ಫಲಕಗಳನ್ನೂ ಹಾಕಿಲ್ಲ. ಈ ರೀತಿಯ ಅವೈಜ್ಞಾನಿಕ ಹಂಪ್ಗಳ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಆರೋಪಿಸಿದ್ದಾರೆ. ಹಂಪ್ಗಳ ಮೇಲೆ ಬಿಳಿ ಬಣ್ಣದ ಪಟ್ಟಿ ಬಳಿಯಲಾಗಿತ್ತಾದರೂ ಅವು ಈಗ ಅಳಿಸಿಹೋಗಿವೆ. ಹೀಗಾಗಿ ಅವುಗಳಿಗೆ ಮತ್ತೆ ಬಣ್ಣ ಬಳಿಯುವ ಜೊತೆಗೆ ಸೂಚನಾ ಫಲಕಗಳನ್ನು ಅಳವಡಿಸಬೇಕೆಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.







